ಎಲ್ಲ ತರಹದ ಸಾಲ ಮನ್ನಾಕ್ಕೆ ಒತ್ತಾಯ

ಮೊಳಕಾಲ್ಮೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಾಲಮನ್ನಾ ವಿಚಾರದಲ್ಲಿನ ತಾರತಮ್ಯ ನೀತಿ ಬಿಟ್ಟು ದೀರ್ಘಾವಧಿ ಸೇರಿದಂತೆ ಎಲ್ಲ ಬಗೆಯ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಳ್ಳಬೇಕೆಂದು ಶಾಸಕ ಬಿ. ಶ್ರೀರಾಮುಲು ಒತ್ತಾಯಿಸಿದರು.

ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಮುತ್ತಿಗಾರಹಳ್ಳಿ ರೈತ ಬಿ.ಟಿ. ಸಣ್ಣರುದ್ರಪ್ಪ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕರು, ಸರ್ಕಾರದಿಂದ ದೊರೆವ ಪರಿಹಾರ ಸೇರಿದಂತೆ ಮೃತ ರೈತನ ಇಬ್ಬರು ಅಂಗವಿಕಲ ಗಂಡು ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಸಿಎಂ ಬಳಿ ಚರ್ಚಿಸುವುದಾಗಿ ಭರವಸೆ ನೀಡಿದರು.

ರೈತ ಪರ ಎಂದು ಹೇಳಿಕೊಳ್ಳುವ ಸಿಎಂ, ಅಲ್ಪಾವಧಿ ಬೆಳೆಸಾಲ ಮಾತ್ರ ಮನ್ನಾ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಜನ ಬರ ಬೇಗೆಯಲ್ಲಿ ಬೇಯುತ್ತಿದ್ದಾರೆ. ರೈತರು ಹೊಟ್ಟೆಗೆ ಆಧಾರವಾದ ಜಮೀನು ಅಡವಿಟ್ಟು ದೀರ್ಘಾವಧಿ ಸಾಲ ಪಡೆದಿದ್ದಾರೆ. ಇಂತವರಿಗೆ ಸಹಾಯ ಮಾಡದಿದ್ದರೆ ಅವರ ಸಾವಿಗೆ ಸಿಎಂ ಕುಮಾರಸ್ವಾಮಿಯೇ ಕಾರಣವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಂತರ ದೇವರ ಎತ್ತುಗಳಿರುವ ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ಮೇವು, ಕಡಿವ ನೀರಿನ ವ್ಯವಸ್ಥೆ ಪರಿಶೀಲಿಸಿದ ಶಾಸಕರು, ಕೂಡಲೇ ರೈತರ ಜಾನುವಾರುಗಳಿಗೂ ಗೋಶಾಲೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಬಳಿ ಚರ್ಚಿಸುವುದಾಗಿ ಹೇಳಿದರು.

ತಹಸೀಲ್ದಾರ್ ಜಿ. ಕೊಟ್ರೇಶ್, ಜಿಪಂ ಸದಸ್ಯ ಡಾ. ಯೋಗೇಶ್‌ಬಾಬು, ಬಿಜೆಪಿ ಮಂಡಲ ಅಧ್ಯಕ್ಷ ಟಿ. ರೇವಣ್ಣ, ಶ್ರೀರಾಮರೆಡ್ಡಿ ಮತ್ತಿತರರಿದ್ದರು.