ಗಗನಕ್ಕೇರಿದ ತರಕಾರಿ ಬೆಲೆ

ಮೊಳಕಾಲ್ಮೂರು: ಬೇಸಿಗೆ ಬಿಸಿಲಿನ ಕಾಟ, ಮಳೆರಾಯನ ಕಣ್ಣಾಮುಚ್ಚಾಲೆ ಆಟದಿಂದ ತರಕಾರಿ ಬೆಲೆ ಗಗನಕ್ಕೆರಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ.

ಬೀನ್ಸ್ ಕೆ.ಜಿಗೆ 120 ರೂ., ಕ್ಯಾರೇಟ್ 90, ಕೋಸು 80, ಬೆಳ್ಳುಳ್ಳಿ 80, ಹೀರೇಕಾಯಿ 60, ಟೊಮೊಟೋ 50, ಬದನೆಕಾಯಿ, ಬೀಟ್‌ರೋಟ್, ಆಲ್ಯೂಗಡ್ಡೆ, ಜವಳಿಕಾಯಿ ತಲಾ 30 ರೂ. ಹಾಗೂ ಸೊಪ್ಪಿನ ಬೆಲೆ ಬಿಸಿಲಿನ ಬೇಗೆಯಂತೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿವೆ.

ತಾಲೂಕು ಬರ ಪೀಡಿತ ಪ್ರದೇಶ. ಲಭ್ಯವಿರುವ ನೀರನ್ನು ಮಿತವಾಗಿ ಬಳಸಿಕೊಳ್ಳುವ ರೈತರು ಒಂದಷ್ಟು ತರಕಾರಿ ಬೆಳೆದು ಮಾರುಕಟ್ಟೆಗೆ ಪೂರೈಸುತ್ತಿದ್ದರು. ಕೊಳವೆಬಾವಿಗಳು ಸಂಪೂರ್ಣವಾಗಿ ಬತ್ತಿರುವ ಹಿನ್ನೆಲೆಯಲ್ಲಿ ತರಕಾರಿ ಬೆಳೆ ಕುಸಿತಗೊಂಡು ಬೆಲೆ ದಿನೇ ದಿನೆ ಗಗನಕ್ಕೇರುತ್ತಿದ್ದು ಗ್ರಾಹಕರಿಗೆ ಬರೆ ಎಳೆದಂತಾಗಿದೆ.

ಮುಂಗಾರು ಲಕ್ಷಣ ಗೋಚರಿಸುತ್ತಿಲ್ಲ. ಇದನ್ನೇ ನೆಪ ಮಾಡಿಕೊಂಡ ಮಾರಾಟಗಾರರು ಶಿವಮೊಗ್ಗ, ದಾವಣಗೆರೆ, ತುಮಕೂರು, ಆಂಧ್ರ ಪ್ರದೇಶದಿಂದ ತರಕಾರಿ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಳೆ ಕೊರತೆ, ಮಾರಾಟಗಾರರ ದುರಾಸೆ ಗ್ರಾಹಕರಿಗೆ ಹೊರೆಯಾಗಿದೆ.