ಮೊಳಕಾಲ್ಮೂರು: ನಕಲಿ ವೈದ್ಯರ ಹಾವಳಿ ನಿಲ್ಲಿಸಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದೇ ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದ ವೇಳೆ ಮಾತನಾಡಿ, ಕೆಪಿಎಂ ಕಾಯ್ದೆ ಪ್ರಕಾರ ಜಿಲ್ಲೆಯಲ್ಲಿ 438 ವೈದ್ಯರು ನೋಂದಣಿಗೆ ಅರ್ಹರಾಗಿದ್ದಾರೆ. ಈಗಾಗಲೇ ಕ್ಲಿನಿಕ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ 53 ಜನರನ್ನು ಅನರ್ಹರೆಂದು ಗುರುತಿಸಿ ತಮ್ಮ ವೈದ್ಯಕೀಯ ದಾಖಲೆ ಹಾಜರುಪಡಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಕೆಲವರು ತಮ್ಮದು ವಂಶಪಾರಂಪರ್ಯ ವೈದ್ಯ ಪದ್ಧತಿ ಎಂದು ನ್ಯಾಯಾಲಯದ ಮೊರೆ ಹೋಗಿ ಅನುಮತಿ ಪಡೆದಿದ್ದಾರೆ. ಇದಾಗ್ಯೂ ಜಿಲ್ಲಾದ್ಯಂತ ನಕಲಿ ವೈದ್ಯರ ಕ್ಲಿನಿಕ್ಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು.
ನಂತರ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳಿಂದ ಆಸ್ಪತ್ರೆ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ನೋವೆಂದು ದವಾಖಾನೆಗೆ ಬರುವ ಪ್ರತಿ ರೋಗಿಗೂ ಸಮಾನ ನ್ಯಾಯ ಸಿಗಬೇಕು. ಯಾರನ್ನೂ ಕಡೆಗಣಿಸದೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಅವರೊಂದಿಗೆ ಪ್ರೀತಿ ವಿಶ್ವಾಸದಿಂದ ಮಾತನಾಡುವ ಕಲೆ ರೂಢಿಸಿಕೊಳ್ಳಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.
ಬಡ ಜನರ ಅನುಕೂಲಕ್ಕಾಗಿ ಆಸ್ಪತ್ರೆ ಆವರಣದಲ್ಲಿ ರಿಯಾಯಿತಿ ದರದ ಜನರಿಕ್ ಔಷಧ ಮಳಿಗೆ ಹಾಗೂ ಕ್ಯಾಂಟೀನ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಡಾ. ಮಂಜುನಾಥ್, ಡಾ. ಮಹೇಶ್, ಕಚೇರಿ ಅಧೀಕ್ಷಕಿ ಅನುಸೂಯಮ್ಮ ಹಾಗೂ ಸಿಬ್ಬಂದಿ ಇದ್ದರು.