ಸಂಘದರ್ಶನ ಮಾಡಿಸಿದ ಭಾಗ್ವತ್

| ರವೀಂದ್ರ ಎಸ್.ದೇಶಮುಖ್

ರಾಷ್ಟ್ರೀಯ ಸ್ವಯಂಸೇವಕ ಸಂಘ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದಂತೆ ಅದರ ಅನುಯಾಯಿಗಳ ಜತೆ ವಿರೋಧಿಗಳ ಸಂಖ್ಯೆಯೂ ಹೆಚ್ಚಿದೆ. ವಿರೋಧದ ದನಿಗೇನೂ ಸಂಘದ ವಿರೋಧವಿಲ್ಲ. ಆದರೆ, ಸಂಘ ಏನೆಂದು ತಿಳಿದುಕೊಳ್ಳದೆಯೇ ಟೀಕಿಸುವುದು ತರವಲ್ಲ ಎಂಬ ಕಾರಣಕ್ಕಾಗಿಯೇ ಆರೆಸ್ಸೆಸ್ ಸರಸಂಘಚಾಲಕ ಮೋಹನ ಭಾಗ್ವತ್ ಅವರು ಮೂರು ದಿನಗಳ ಕಾಲ (ಸೆ.17-19) ದೆಹಲಿಯಲ್ಲಿ ‘ಭವಿಷ್ಯದ ಭಾರತ-ಸಂಘದ ದೃಷ್ಟಿಕೋನ’ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸಂಘ ಎಂದರೆ ಮುಸ್ಲಿಂವಿರೋಧಿ, ಕಾಂಗ್ರೆಸ್​ವಿರೋಧಿ, ಅದು ಸಂವಿಧಾನವನ್ನೇ ಬದಲಿಸಲು ಹೊರಟಿದೆ ಎಂಬೆಲ್ಲ ಆರೋಪಗಳು ಆಗಾಗ ದೊಡ್ಡದನಿಯಲ್ಲೇ ಕೇಳಿಬರುತ್ತವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಂತೂ ಆರೆಸ್ಸೆಸ್ಸನ್ನು ಮುಸ್ಲಿಂ ಬ್ರದರ್​ಹುಡ್ ಸಂಘಟನೆಗೆ ಹೋಲಿಸಿದ್ದರು. ಅದಕ್ಕೆಂದೆ, ರಾಹುಲ್ ಗಾಂಧಿ, ಸೀತಾರಾಮ್ ಯೆಚೂರಿ ಸೇರಿದಂತೆ ಸೈದ್ಧಾಂತಿಕ ವಿರೋಧಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಆರೆಸ್ಸೆಸ್ ಹೊಸ ಹೆಜ್ಜೆ ಇರಿಸಿತು. ಸಂಘದ ಬಗೆಗಿನ ಪೂರ್ವಗ್ರಹಗಳು, ಸಂಘ ಎಂದರೆ ಇಷ್ಟೇನೆ ಎಂಬ ಉಡಾಫೆ ದೂರಮಾಡಲು ಭಾಗ್ವತ್ ಉಪನ್ಯಾಸ ಯಶಸ್ವಿಯಾಯಿತಲ್ಲದೆ, ಸಂಘದ ವಾಸ್ತವ ಚಹರೆ ಲೋಕದ ಮುಂದೆ ಅನಾವರಣಗೊಂಡು ಬಹುಕಾಲದಿಂದ ಕಾಡುತ್ತಿದ್ದ ಪ್ರಶ್ನೆಗಳಿಗೂ ಉತ್ತರಗಳು ದೊರೆತವು. ಸಂಘವನ್ನು ಕಟುವಾಗಿ ದ್ವೇಷಿಸುತ್ತಿದ್ದ ಜವಾಹರಲಾಲ್ ನೆಹರು ಅವರೇ ಸ್ವಯಂಸೇವಕರ ಸೇವೆಯನ್ನು ಮೆಚ್ಚಿ ಅವರನ್ನು ಗಣರಾಜ್ಯೋತ್ಸವ ಪರೇಡ್​ಗೆ ಆಹ್ವಾನಿಸಿದ್ದು, ಗಾಂಧೀಜಿ ಸಂಘದ ಶಾಖೆಗೆ ಭೇಟಿ ನೀಡಿ ಮಾತನಾಡಿದ್ದೆಲ್ಲ ಇತಿಹಾಸದ ಮರೆಯದ ಪುಟಗಳಾದರೆ ನಿಕಟಪೂರ್ವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇತ್ತೀಚೆಗಷ್ಟೇ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲವೇ ಏರ್ಪಟ್ಟಿತ್ತು. ಆದರೆ, ಇದನ್ನು ಕಂಡ ಬಹುತೇಕರು ಮಾತ್ರ ‘ಈ ಸಂಘಟನೆಯಲ್ಲೇನೋ ವಿಶೇಷವಿದೆ’ ಎಂದುಕೊಂಡರು.

‘ಆರೆಸ್ಸೆಸ್ ಏನು ಮಾಡುತ್ತದೆ?’ ಎಂಬ ಮೂಲಭೂತ ಪ್ರಶ್ನೆಗೆ ಭಾಗ್ವತ್ ಸರಳ ಆದರೆ ಪರಿಣಾಮಕಾರಿ ಉತ್ತರ ನೀಡಿದರು. ‘‘ಹಲವು ದೋಷಗಳಿಂದ ಕೂಡಿರುವ ಸಮಾಜವನ್ನು ಸುಧಾರಿಸಬೇಕಾದರೆ ಉತ್ತಮ ಚಾರಿತ್ರ್ಯದ, ‘ಇದು ನನ್ನ ಸಮಾಜ, ನನ್ನ ದೇಶ’ ಎಂಬ ಸಮರ್ಪಣಾ ಭಾವನೆಯಿಂದ ದುಡಿಯುವ ಜನರು ತಯಾರಾಗಬೇಕು. ಇದಕ್ಕಾಗಿ ಸಂಘ ವ್ಯಕ್ತಿನಿರ್ವಣದಲ್ಲಿ ತೊಡಗಿದೆ, ವ್ಯಕ್ತಿ ನಿರ್ವಣದ ಮೂಲಕ ಸಮಾಜ ನಿರ್ವಣ. ಭೇದಮುಕ್ತ, ಶೋಷಣೆಮುಕ್ತ, ಸಮತಾಯುಕ್ತ ಸಮಾಜದ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. ಪ್ರತಿ ಊರಲ್ಲೂ ದೇಶಕ್ಕಾಗಿ ದುಡಿಯುವ, ಮಿಡಿಯುವ ಸ್ವಯಂಸೇವಕ ಇರಬೇಕು ಎಂಬುದು ನಮ್ಮ ಇರಾದೆ’ ಎಂಬುದು ಅವರು ನೀಡಿದ ವಿವರಣೆ.

‘ಹಿಂದುತ್ವ ಎಂಬುದು ಜೀವನಪದ್ಧತಿ, ಮುಸ್ಲಿಮರನ್ನು ಒಳಗೊಳ್ಳದ ಹಿಂದುತ್ವ ಇರಲು ಸಾಧ್ಯವೇ ಇಲ್ಲ’ ಎಂಬ ಅವರ ಸ್ಪಷ್ಟೋಕ್ತಿ ಸಂಘ ಮುಸ್ಲಿಂವಿರೋಧಿ ಎಂಬ ಗ್ರಹಿಕೆಯನ್ನು ದೂರಮಾಡುವಲ್ಲಿ ಸಹಾಯಕವಾಗಬಲ್ಲದು. ಡಾ.ಕೇಶವ ಬಲಿರಾಮ ಹೆಡ್ಗೆವಾರ್ ಸಂಘ ಆರಂಭಿಸಿದಾಗಿನ ಸ್ಥಿತಿ, ಉದ್ದೇಶ, ಸಾಗಿಬಂದ ಹಾದಿ, ಗೋಳ್ವಲಕರ ಗುರೂಜಿ ಅವರ ವಿಚಾರಗಳು, ಸ್ವಾತಂತ್ರ್ಯ ಹೋರಾಟ ಈ ಎಲ್ಲ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತಿದ್ದಂತೆ ಇತಿಹಾಸದ ಗರ್ಭದಲ್ಲಿ ಅಡಗಿದ್ದ ಅನೇಕ ವಾಸ್ತವಗಳು ಅನಾವರಣಗೊಂಡವು. ವಿವಿಧತೆಯನ್ನು ಯಾವಾಗಲೂ ಗೌರವಿಸಿಕೊಂಡು ಬಂದಿರುವ ಸಂಘ ಭವಿಷ್ಯದ ಭಾರತದಲ್ಲೂ ಈ ವಿವಿಧತೆಗೆ ವಿಶಿಷ್ಟ ಸ್ಥಾನ ನೀಡುತ್ತದೆ ಎಂದು ಗಟ್ಟಿದನಿಯಲ್ಲಿ ಹೇಳಿದರು.

‘ಸಂಘ ಸ್ವಯಂಸೇವಕರ ಮೂಲಕವೇ ನಡೆಯುತ್ತದೆ. ಪ್ರಜಾಪ್ರಭುತ್ವದ ಅತ್ಯುಚ್ಚ ಮೌಲ್ಯಗಳನ್ನು ಸಂಘದಲ್ಲಿ ಕಾಣಬಹುದು’ ಎಂಬುದಕ್ಕೆ ಭಾಗ್ವತ್ ಹೇಳಿದ ಘಟನೆ-‘‘ನಾಗಪುರದ ಮೋಹಿತೆ ಶಾಖೆ ಪಟ್ಟಿಯಲ್ಲಿ ನನ್ನ ಹೆಸರಿದೆ. ನಾನು ಪ್ರವಾಸದಲ್ಲಿರುವುದರಿಂದ ಪ್ರತಿನಿತ್ಯ ಈ ಶಾಖೆಗೆ ಹಾಜರಾಗಲು ಆಗುವುದಿಲ್ಲ. ಅದೊಂದು ದಿನ ಶಾಖೆಗೆ ಹೋದಾಗ 4ನೇ ತರಗತಿಯ ಸ್ವಯಂಸೇವಕನೊಬ್ಬ ನನ್ನಲ್ಲಿಗೆ ಬಂದು ‘ದಿನವೂ ತಪ್ಪದೆ ಶಾಖೆಗೆ ಬರಬೇಕು ಎಂದು ಮುಖ್ಯಶಿಕ್ಷಕರು ಹೇಳಿದ್ದಾರೆ. ನೀವು ಈ ಶಾಖೆಯ ಸ್ವಯಂಸೇವಕರಲ್ಲವೇ? ಶಾಖೆಯಲ್ಲಿ ಕಾಣುವುದೇ ಇಲ್ಲವಲ್ಲ?’ ಎಂದು ಪ್ರಶ್ನಿಸಿದ. ಪ್ರವಾಸವಿರುತ್ತದೆ, ಬೇರೆ-ಬೇರೆ ಶಾಖೆಗಳಿಗೆ ಭೇಟಿ ನೀಡಬೇಕಾಗುತ್ತದೆ ಎಂದು ಹೇಳಿದಾಗ ಈ ಹುಡುಗ ನಾನು ಶಾಖೆಗೆ ಹೋದಾಗಲೆಲ್ಲ ‘ಎಲ್ಲೆಲ್ಲಿ ಪ್ರವಾಸ ಮಾಡಿದ್ರಿ? ಎಷ್ಟು ಶಾಖೆಗಳಿಗೆ ಭೇಟಿ ಕೊಟ್ಟಿದ್ದಿರಿ? ಎಂದೆಲ್ಲ ಪ್ರಶ್ನಿಸುತ್ತಾನೆ. ಇದು ಸಂಘದ ನಿರ್ವಹಣೆ. ಇಲ್ಲಿ ಯಾರು ಯಾರನ್ನೂ ಪ್ರಶ್ನಿಸಬಹುದು’’.

‘‘ಸಂಸ್ಕಾರ ಮತ್ತು ವಿವೇಕದ ಬಲದ ಮೇಲೆ ಸಂಘ ನಡೆಯುತ್ತಿದೆ, ಹಾಗಾಗಿಯೇ ಸೇವಾಕಾರ್ಯದಲ್ಲಿ ನಮ್ಮ ಸ್ವಯಂಸೇವಕರು ಮುಂದಿರುತ್ತಾರೆ’’ ಎಂಬ ಅವರ ಮಾತು ಸಂಘದ ಶಕ್ತಿಯನ್ನು ದರ್ಶಿಸಿತು. ಸೈದ್ಧಾಂತಿಕ ವಿರೋಧಿಗಳೊಂದಿಗೆ ರ್ಚಚಿಸುವ, ಸಂವಾದ ನಡೆಸುವ ಪ್ರಕ್ರಿಯೆ ಸಂಘದಲ್ಲಿ ಮೊದಲಿನಿಂದಲೂ ಇದೆ, ಈಗಲೂ ನಡೆಯುತ್ತಿದೆ. ರಾಷ್ಟ್ರೀಯ ಮುಸ್ಲಿಂ ಜಾಗರಣ ಮಂಚ್​ನಂಥ ರಾಷ್ಟ್ರವಾದಿ ಸಂಘಟನೆ ಹುಟ್ಟಿಕೊಂಡಿರುವುದು ಇದೇ ಕಾರಣಕ್ಕೆ. ರಾಜಕೀಯದಲ್ಲೂ ಭಿನ್ನಾಭಿಪ್ರಾಯಗಳು, ವಿರೋಧಗಳು ಇರಬೇಕೆ ವಿನಾ ಅದು ಪರಸ್ಪರ ಶತ್ರುತ್ವಕ್ಕೆ ತಿರುಗಿಕೊಳ್ಳಬಾರದು ಎಂಬ ವಿಚಾರಗಳು ಇಂದಿನ ರಾಜಕೀಯ ವೈಷಮ್ಯ/ಕಲಹಗಳಿಗೆ ಮದ್ದಾಗಬಲ್ಲವು.

ಒಂದು ವರ್ಗ ಸಂಘವನ್ನು ಅರ್ಥ ಮಾಡಿಕೊಳ್ಳದೇ ಅದನ್ನು ತೆಗಳುವಲ್ಲಿ ನಿರತವಾಗಿದೆ. ಅದಕ್ಕೆ ಪ್ರತಿಕ್ರಿಯೆ ನೀಡುವುದಕ್ಕಿಂತ ಸಂಘವನ್ನು ಅರ್ಥೈಸುವುದೇ ಲೇಸು ಎಂಬ ತೀರ್ವನಕ್ಕೆ ಸಂಘಟನೆಯ ಪ್ರಮುಖರು ಬಂದಿದ್ದರಿಂದಾಗಿ ಆರೆಸ್ಸೆಸ್ ಬದಲಾದ ಸ್ಥಿತಿಯಲ್ಲಿ ತನ್ನನ್ನು ತಾನು ಹೊಸ ಸ್ವರೂಪದಲ್ಲಿ ಬಿಂಬಿಸಿಕೊಂಡಿದೆ. ಭವಿಷ್ಯದ ಭಾರತದಲ್ಲಿ ತನ್ನ ಪಾತ್ರ ಏನಿರಲಿದೆ ಎಂಬ ಚಿತ್ರಣವನ್ನು ತೆರೆದಿಟ್ಟು, ತಾನು ಯಾವುದೇ ರಾಜಕೀಯ ಪಕ್ಷದ ರಿಮೋಟ್ ಕಂಟ್ರೋಲ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಭಾಗ್ವತರ ಈ ಉಪನ್ಯಾಸ ಸರಣಿ ಸಂಘದ ವೈಚಾರಿಕ ವಿರೋಧಿಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಲ್ಲದೆಂಬುದು ಕುತೂಹಲಕರ.

ಸಂಘವನ್ನು ಆಧುನಿಕ ವಿಚಾರಗಳಿಗೆ ತೆರೆದುಕೊಳ್ಳುವಂತೆ ಮಾಡಿರುವ ಮೋಹನ ಭಾಗ್ವತರು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಚಂದ್ರಪುರದವರು(ಜನನ :1950 ಸೆಪ್ಟೆಂಬರ್ 11). ಇವರ ತಂದೆ ಮಧುಕರ್ ರಾವ್ ಭಾಗ್ವತ್ ಅವರೇ ಲಾಲಕೃಷ್ಣ ಆಡ್ವಾಣಿ ಅವರನ್ನು ಸಂಘಕ್ಕೆ ಕರೆತಂದಿದ್ದು. ಮಧುಕರ್ ರಾವ್ ಗುಜರಾತ್ ಪ್ರಾಂತ ಪ್ರಚಾರಕ

ರಾಗಿ ಕಾರ್ಯನಿರ್ವಹಿಸಿದವರು. ಚಂದ್ರಪುರದ ಲೋಕಮಾನ್ಯ ತಿಲಕ್ ವಿದ್ಯಾಲಯದಲ್ಲಿ ಶಾಲಾಶಿಕ್ಷಣ, ಜನತಾ ಕಾಲೇಜಿನಿಂದ ಬಿಎಸ್ಸಿ ಪ್ರಥಮ ವರ್ಷದ ಶಿಕ್ಷಣ ಪೂರ್ಣಗೊಳಿಸಿ

ದರು. 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಶಿಕ್ಷಣವನ್ನು ಮೊಟಕುಗೊಳಿಸಿ, ಪೂರ್ಣಾವಧಿ ಸ್ವಯಂಸೇವಕರಾದರು. 1977ರಲ್ಲಿ ಅಕೋಲಾ ಪ್ರಚಾರಕರಾದ ಅವರು ಕ್ರಮೇಣ ನಾಗಪುರ ಮತ್ತು ವಿದರ್ಭ ಪ್ರಾಂತ್ಯದ ಪ್ರಚಾರಕರಾಗಿ ಕಾರ್ಯನಿರ್ವಹಿಸಿದರು. 1991ರಿಂದ 1999ರವರೆಗೆ ಶಾರೀರಿಕ ಶಿಕ್ಷಣ ಕಾರ್ಯಕ್ರಮದ ಅಖಿಲ ಭಾರತ ಪ್ರಮುಖರಾಗಿದ್ದರು. 2000ನೇ ಇಸ್ವಿಯಲ್ಲಿ ಸರಕಾರ್ಯವಾಹ ಆಗಿ ನಿಯುಕ್ತಿ ಮಾಡಲಾಯಿತು. 2009 ಮಾರ್ಚ್ 21ರಿಂದ ಇವರು ಸರಸಂಘಚಾಲಕ ಅಂದರೆ ಸಂಘದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೇರಮಾತು, ಮೃದು ಸ್ವಭಾವ, ವ್ಯಾಪಕ ಪ್ರವಾಸ, ಅಧ್ಯಯನದ ಗುಣಗಳಿಂದ ಸ್ವಯಂಸೇವಕರಿಗೆ ಹತ್ತಿರವಾಗಿದ್ದಾರೆ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

[ಪ್ರತಿಕ್ರಿಯಿಸಿ: [email protected], [email protected]]