ಕೋಲ್ಕತ: ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಕೌಟುಂಬಿಕ ಜೀವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದ ಅವರ ಪತ್ನಿ ಹಸಿನ್ ಜಹಾನ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಪೊಲೀಸರ ವಿರುದ್ಧವೇ ದೂರು ನೀಡಿದ್ದಾರೆ. ಕಾರಣವೇನು ಗೊತ್ತೇ?
ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸವನ್ನು ಸ್ವಾಗತಿಸಿ ಹಸಿನ್ ಜಹಾನ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಕೊಲೆ, ಅತ್ಯಾಚಾರದ ಬೆದರಿಕೆಗಳು ಬಂದಿದ್ದವು. ಇದರಿಂದಾಗಿ ತನಗೆ ಮತ್ತು ಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಅವರು ಪೊಲೀಸರ ಮೊರೆ ಹೋಗಿದ್ದರು. ಆದರೆ ತನ್ನ ಬೇಡಿಕೆಯನ್ನು ಈಡೇರಿಸದೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಅವರೀಗ ಕಲ್ಕತ್ತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ದೂರು ಸ್ವೀಕರಿಸಿರುವ ಕೋರ್ಟ್ ಮುಂದಿನ ವಾರ ವಿಚಾರಣೆ ನಡೆಸುವ ನಿರೀಕ್ಷೆ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಜೀವ ಬೆದರಿಕೆ ಬರುತ್ತಿದೆ ಎಂದು ಆಗಸ್ಟ್ 9ರಂದೇ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೂ ಪೊಲೀಸರು ಈ ಬಗ್ಗೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹಸಿನ್ ಜಹಾನ್ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಹೊಸ ಪಾತ್ರದ ಮೂಲಕ ಐಪಿಎಲ್‌ಗೆ ಮರಳಿದ ಮೂವರು ಕ್ರಿಕೆಟಿಗರು
ಮೊಹಮದ್ ಶಮಿ ಅವರು ಈಗ ಯುಎಇಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಐಪಿಎಲ್‌ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಈ ನಡುವೆ ಶಮಿ ತಾನೀಗ ಮಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಲಾಕ್‌ಡೌನ್‌ನಿಂದಾಗಿ ಕಳೆದ ಕೆಲ ತಿಂಗಳಿನಿಂದ ಆಕೆಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದಿದ್ದರು.