ಕಡಿಮೆ ಓವರ್​ ಮಾಡಲು ಬಿಸಿಸಿಐ ಸೂಚಿಸಿದರೂ ಕ್ಯಾರೆ ಎನ್ನದ ಮಹಮ್ಮದ್​ ಶಮಿ!

ನವದೆಹಲಿ: ಟೀಂ ಇಂಡಿಯಾದ ವೇಗಿ ಮಹಮ್ಮದ್​ ಶಮಿ ಅವರು ಬಿಸಿಸಿಐ ನೀಡಿದ ಸೂಚನೆಯನ್ನು ಪಾಲಿಸದೇ ಅದನ್ನು ಉಲ್ಲಂಘಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸದ್ಯ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ನಂತರ ಟೆಸ್ಟ್​ ಪಂದ್ಯದಲ್ಲಿ ಆಸಿಸ್​ ಪಡೆಯನ್ನು ಎದುರಿಸಲಿದೆ. ಟೆಸ್ಟ್​ ಸರಣಿಗೆ ಆಯ್ಕೆ ಆಗಿರುವ ಶಮಿ ಅವರು ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಪಶ್ಚಿಮ ಬಂಗಾಳ ಪರವಾಗಿ ಆಡುತ್ತಿದ್ದು, ಕೇರಳ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 15 ರಿಂದ 17 ಓವರ್​ಗಿಂತ ಹೆಚ್ಚು ಬೌಲ್​​​ ಮಾಡದಂತೆ ಬಿಸಿಸಿಐ ಸೂಚನೆ ನೀಡಿತ್ತು.

ಆದರೆ, 26 ಓವರ್​ಗಳನ್ನು ಎಸೆದು ಬಿಸಿಸಿಐ ಸೂಚನೆಯನ್ನು ಶಮಿ ಗಾಳಿಗೆ ತೂರಿದ್ದು, ರಾಜ್ಯಕ್ಕೆ ಆಡುವಾಗ ನಾವು ನಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕಾಗುತ್ತದೆ ಎಂದು ಎರಡನೇ ದಿನದಾಟದ ಅಂತ್ಯದ ವೇಳೆಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಯಾವುದೇ ತೊಂದರೆಯ ಅನುಭವ ಆಗುತ್ತಿಲ್ಲ. ನಾನು ಫಿಟ್​ ಆಗಿಯೇ ಇದ್ದೀನಿ. ವಿಕೆಟ್​ ಸಹ ಪಡೆಯುತ್ತಿದ್ದೇನೆ. ಎಲ್ಲಿಯವರೆಗೆ ಇದು ಸಾಧ್ಯವೋ ಅಲ್ಲಿಯವರೆಗೂ ಮುಂದುವರಿಸುತ್ತೇನೆ. ಇದು ನನ್ನ ಸ್ವಂತ ನಿರ್ಧಾರ ಎಂದು ಹೇಳುವ ಮೂಲಕ ಈ ವರ್ಷದಲ್ಲಿ ಹೆಚ್ಚು ಟೆಸ್ಟ್​ ವಿಕೆಟ್​ಗಳನ್ನು ಕಬಳಿಸಿರುವ ಶಮಿ ಬಿಸಿಸಿಐ ಸಲಹೆಯನ್ನು ನಿರಾಕರಿಸಿದ್ದಾರೆ.

ಮುಂಬರುವ ಆಸಿಸ್​ ಟೆಸ್ಟ್​ ಸರಣಿ ಹಿನ್ನೆಲೆಯಲ್ಲಿ ಶಮಿ ಅವರ ಫಿಟ್​ನೆಸ್​ ಅನ್ನು ಗಣನೆಗೆ ತೆಗೆದುಕೊಂಡು ಅದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಣಜಿ ಪಂದ್ಯದಲ್ಲಿ ಕಡಿಮೆ ಓವರ್​ಗಳನ್ನು ಎಸೆಯುವಂತೆ ಬಿಸಿಸಿಐ ಶಮಿ ಅವರಿಗೆ ಸೂಚನೆ ನೀಡಿತ್ತು. (ಏಜೆನ್ಸೀಸ್​)