ಏಕದಿನ ಪಂದ್ಯದಲ್ಲಿ ವೇಗವಾಗಿ ನೂರು ವಿಕೆಟ್​ ಪಡೆದ ಸಾಧನೆಯನ್ನು ಮಗಳಿಗೆ ಅರ್ಪಿಸಿದ ಶಮಿ

ನೇಪಿಯರ್​: ಏಕದಿನ ಮಾದರಿ ಪಂದ್ಯಗಳಲ್ಲಿ ವೇಗವಾಗಿ ನೂರು ವಿಕೆಟ್​ ಪಡೆದ ಭಾರತೀಯನೆಂಬ ಖ್ಯಾತಿಗೆ ಟೀಂ ಇಂಡಿಯಾದ ವೇಗಿ ಮಹಮ್ಮದ್​ ಶಮಿ ಅವರು ಭಾಜನರಾಗಿದ್ದು, ತಮ್ಮ ಸಾಧನೆಯನ್ನು ಮಗಳಿಗೆ ಅರ್ಪಿಸಿದ್ದಾರೆ.

ಬುಧವಾರ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್​ ಪಡೆಯುವ ಮೂಲಕ ಶಮಿ ಈ ಸಾಧನೆಯ ಸಾಲಿಗೆ ಸೇರಿದ್ದಾರೆ. ಒಟ್ಟು 56 ಏಕದಿನ ಪಂದ್ಯಗಳನ್ನು ಆಡಿರುವ ಶಮಿ ಒಟ್ಟು 102 ವಿಕೆಟ್​ಗಳನ್ನು ತಮ್ಮ ಬತ್ತಳಿಕೆಗೆ ಹಾಕಿಕೊಂಡಿದ್ದಾರೆ.

ಬಹುದಿನಗಳ ನಂತರ ನ್ಯೂಜಿಲೆಂಡ್​ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗುವ ಮೂಲಕ ತಂಡಕ್ಕೆ ಉತ್ತಮವಾಗಿ ಮರಳಿದ್ದೇನೆ. ತಂಡದ ನಾಯಕ ಕೊಹ್ಲಿ ಅವರ ಪ್ರೋತ್ಸಾಹ, ಸಹ ಆಟಗಾರರ ಬೆಂಬಲ, ಕ್ರಿಕೆಟ್​ ನಿರ್ವಾಹಕರು ಮತ್ತು ಸಿಬ್ಬಂದಿ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಶಮಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ಇಂದು ನಡೆದ ಪಂದ್ಯದಲ್ಲಿ ಮೂರು ವಿಕೆಟ್​ ಪಡೆಯುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾದರು.

ಟ್ವೀಟ್​ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿರುವ ಶಮಿ ತಮ್ಮ ಸಾಧನೆಯನ್ನು ಪ್ರೀತಿಯ ಮಗಳಾದ ಐರಾಳಿಗೆ ಸಮರ್ಪಿಸಿದ್ದಾರೆ.

ಶಮಿ ಬಿಟ್ಟರೆ 59 ಏಕದಿನ ಪಂದ್ಯಗಳಲ್ಲಿ 100 ವಿಕೆಟ್​ ಪಡೆದು ಇರ್ಫಾನ್​ ಪಠಾಣ್​ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಜಹೀರ್​ ಖಾನ್​(65 ಪಂದ್ಯ), ನಾಲ್ಕನೇ ಸ್ಥಾನದಲ್ಲಿ ಅಜಿತ್​ ಅಗರ್ಕರ್​(67) ಹಾಗೂ ಜಾವಗಲ್​ ಶ್ರೀನಾಥ್​(68) ಐದನೇ ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್​)