ಬೀಳಗಿ: ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದಾಗ, ಅದನ್ನು ನಿಗ್ರಹಿಸಲು ಭಗವಂತನ ರೂಪದಲ್ಲಿ ನರೇಂದ್ರ ಮೋದಿ ಅವರು ಬಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹನುಮಂತ ಆರ್. ನಿರಾಣಿ ಹೇಳಿದರು.

ಸ್ಥಳೀಯ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಹುಟ್ಟಡಗಿಸಿದೆ. ಅನೇಕ ಪಾಪ ಕೃತ್ಯಗಳನ್ನು ಮಾಡುತ್ತ, ಇನ್ನೊಬ್ಬರನ್ನು ದ್ವೇಷಿಸಿ ಹತಾಶರನ್ನಾಗಿ ಮಾಡುವ ಮನೋಭಾವದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವಂತಹ ಶಕ್ತಿ ದೇವರು ನಮ್ಮ ಸೈನಿಕರಿಗೆ ನೀಡಲಿ ಎಂದರು.
ಭಯೋತ್ಪಾದಕರನ್ನು ಹುಟ್ಟು ಹಾಕುವುದು ಮತ್ತು ಅವರನ್ನು ಪ್ರೋತ್ಸಾಹಿಸುತ್ತಿರುವುದು ಪಾಕಿಸ್ತಾನ ಸರ್ಕಾರದ ಕೆಲಸ. ಭಾರತೀಯ ಸೇನೆ ಸಮರ್ಥವಾಗಿದ್ದು, ಮೋದಿಜಿ ಸೈನಿಕರಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ತಮ್ಮ ಪ್ರಾಣವನ್ನು ಪಣಕಿಟ್ಟು ಕೋಟ್ಯಂತರ ಜನರ ಬದುಕಿಸುತ್ತಿರುವ ಭಾರತೀಯ ಸೈನಿಕರಿಗೆ ಅಭಾರಿಯಾಗಿರೋಣ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಹೊಳಬಸು ಬಾಳಶೆಟ್ಟಿ ಮಾತನಾಡಿ, ಪಾಕಿಸ್ತಾನದ ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾರತಕ್ಕೆ ಜಯ ತಂದು ಕೊಡುವ ಕೆಲಸ ನಮ್ಮ ಸೈನಿಕರು ಮಾಡಲಿ. ಅವರಿಗೆ ನಾವು ಸದಾ ಬೆಂಬಲ ನೀಡುತ್ತೇವೆ. ನಾವೆಲ್ಲರೂ ಒಂದಾದಾಗ ಮಾತ್ರ ದೇಶದಿಂದ ಭಯೋತ್ಪಾದನೆ ಹೊರಹಾಕಲು ಸಾಧ್ಯ ಎಂದರು.
ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಎಂ.ಎಂ. ಶಂಬೋಜಿ, ಸಂಗಪ್ಪ ಕಟಗೇರಿ, ವಿ.ಜಿ. ರೇವಡಿಗಾರ, ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್. ಕೊಮಾರದೇಸಾಯಿ, ಮಲ್ಲಿಕಾರ್ಜುನ ಅಂಗಡಿ, ಮಾಜಿ ಎಪಿಎಂಸಿ ಅಧ್ಯಕ್ಷ ರಾಮಣ್ಣ ಕಾಳಪ್ಪಗೋಳ, ಬಸವಂತಪ್ಪ ಸಂಕಾಣಟ್ಟಿ, ವಿಜಯಲಕ್ಷ್ಮೀ ಪಾಟೀಲ, ಮಹಾದೇವಿ ಮೈಸೂರು ಮತ್ತಿತರರಿದ್ದರು.