‘ಮೋದಿ ಗಾಳಿ’ ಹಾಸನದಲ್ಲೇಕೆ ಬೀಸಲಿಲ್ಲ?

ಮಂಜು ಬನವಾಸೆ ಹಾಸನ
ಫೋಟೋ ಫಿನಿಷ್ ಫಲಿತಾಂಶ ಬರುತ್ತದೆ, ಭಾರಿ ಬಿರುಸಿನ ಪೈಪೋಟಿ ನೀಡುತ್ತಾರೆ ಎನ್ನುವ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಎ.ಮಂಜು, ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದ ಸೋಲುಂಡಿದ್ದು, ರಾಜ್ಯಾದ್ಯಂತ ಬೀಸಿದ ‘ಮೋದಿ ಗಾಳಿ’ ಇಲ್ಲೇಕೆ ಗೆಲುವಿನ ದಡ ಹತ್ತಿಸಲಿಲ್ಲ ಎನ್ನುವ ಚರ್ಚೆ ಆರಂಭವಾಗಿದೆ.
ನಾಮಪತ್ರ ಸಲ್ಲಿಕೆ ದಿನದಂದು ಭಾರಿ ಪ್ರಮಾಣದಲ್ಲಿ ಬೆಂಬಲಿಗರನ್ನು ಸೇರಿಸಿ ಹಾಸನದಲ್ಲಿಯೂ ಬಿಜೆಪಿಗೆ ಗೆಲುವು ಸಾಧ್ಯವಿದೆ ಎನ್ನುವ ಭರವಸೆ ಹುಟ್ಟಿಸಿದ್ದ ಎ.ಮಂಜು ಸೋಲಿಗೆ ಅವರ ಕಾರ್ಯತಂತ್ರಗಳು ನಿರೀಕ್ಷಿತ ಫಲ ನೀಡದಿರುವುದೇ ಪ್ರಮುಖ ಕಾರಣವಾಗಿವೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ ಎ.ಮಂಜು, ಅದನ್ನೇ ವಾಗ್ದಾಳಿಯ ಅಸ್ತ್ರವಾಗಿ ಮಾಡಿಕೊಂಡಿದ್ದರು. ಎಲ್ಲ ಪ್ರಚಾರ ಸಭೆಗಳಲ್ಲಿಯೂ ಸಚಿವ ಎಚ್.ಡಿ.ರೇವಣ್ಣ ಅವರ ಕುಟುಂಬವನ್ನೇ ಗುರಿಯಾಗಿಸಿಕೊಂಡು ಟೀಕಾಸ್ತ್ರ ಪ್ರಯೋಗಿಸಿದರು.
ಸಭೆಗಳಲ್ಲಿ ಸಾಕಷ್ಟು ಚಪ್ಪಾಳೆ, ಮೆಚ್ಚುಗೆ ಲಭ್ಯವಾದರೂ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಮತ ಗಳಿಕೆಗೆ ಕಡಿವಾಣ ಹಾಕುವಲ್ಲಿ ಈ ಕಾರ್ಯತಂತ್ರ ಹೆಚ್ಚಿನ ಫಲ ನೀಡಿಲ್ಲ.

2014ರಲ್ಲಿ ಎಚ್.ಡಿ.ದೇವೇಗೌಡರ ಗೆಲುವಿನ ಅಂತರವನ್ನು 3.5 ಲಕ್ಷದಿಂದ ಕೇವಲ 1 ಲಕ್ಷಕ್ಕೆ ಇಳಿಸಿದ್ದನ್ನು ನೆನಪಿಸುತ್ತಿದ್ದ ಎ.ಮಂಜು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿರದಿರುವುದು ತಮಗೆ ಲಾಭ ತರಲಿದೆ ಎನ್ನುವ ಲೆಕ್ಕಾಚಾರ ಹೊಂದಿದ್ದರು.

ಕೈ ಕೊಟ್ಟ ಕಾಂಗ್ರೆಸ್ಸಿಗರು: ಜೆಡಿಎಸ್ ಜತೆಗೆ ವೈರತ್ವ ಹೊಂದಿರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮೈತ್ರಿ ವಿರೋಧಿಸಿ ಪರೋಕ್ಷವಾಗಿ ತಮಗೆ ಬೆಂಬಲ ನೀಡುತ್ತಾರೆ. ಇಲ್ಲವೆ, ನೇರವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಮಂಜು ಭಾವಿಸಿದ್ದರು. ಆದರೆ, ಜಿಲ್ಲಾ ಕಾಂಗ್ರೆಸ್‌ನಲ್ಲಿ ಅವರೇ ಆಸಕ್ತಿ ವಹಿಸಿ ನೇಮಕ ಮಾಡಿಸಿದ್ದ ಪದಾಧಿಕಾರಿಗಳೇ ಪಕ್ಷನಿಷ್ಠೆಯ ನೆಪ ಹೇಳಿ ಪ್ರಜ್ವಲ್ ಪರ ಪ್ರಚಾರದಲ್ಲಿ ತೊಡಗಿಕೊಂಡರು.
ಶ್ವೇತಾ ದೇವರಾಜ್ ಅವರನ್ನು ಜಿಪಂ ಅಧ್ಯಕ್ಷರಾಗಿ ಆಯ್ಕೆ ಮಾಡಲು ಅಗತ್ಯವಾದ ಮೀಸಲಾತಿ ನಿಗದಿ ವಿಷಯದಲ್ಲಿ ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡು ಯಶಸ್ಸು ಕಂಡಿದ್ದ ಎ.ಮಂಜು ಅವರೊಂದಿಗೆ ಶ್ವೇತಾ ಕುಟುಂಬದವರೂ ಬಹಿರಂಗವಾಗಿ ಹೆಜ್ಜೆ ಹಾಕಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದೊಳಗೆ ತಮ್ಮದೇ ಬೆಂಬಲಿಗರ ಪ್ರತ್ಯೇಕ ಗುಂಪು ಸೃಷ್ಟಿಸಿಕೊಂಡಿದ್ದ ಎ.ಮಂಜು, ಬಿ.ಶಿವರಾಮು ಬಣದ ಹಾಗೂ ಯಾವ ಗುಂಪಿಗೂ ಸೇರದ ಪ್ರಮುಖ ಕಾರ್ಯಕರ್ತರು, ಮುಖಂಡರೊಂದಿಗೆ ಸೌಹಾರ್ದತೆ ಕಾಪಾಡಿಕೊಂಡಿರಲಿಲ್ಲ. ಇದರಿಂದಾಗಿ ಜೆಡಿಎಸ್ ಮೇಲೆ ಎಷ್ಟೇ ಕೋಪವಿದ್ದರೂ ಹಲವು ಪ್ರಮುಖ ಮುಖಂಡರು, ಕಾರ್ಯಕರ್ತರು ಬಿಜೆಪಿಯತ್ತ ವಾಲಲಿಲ್ಲ.

ಬಿಜೆಪಿಯಲ್ಲಿ ಒಳಮುನಿಸು: ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿದ್ದ ಎ.ಮಂಜು ಅವರಿಗೆ ದಿಢೀರನೆ ಅಭ್ಯರ್ಥಿಯಾಗುವ ಅವಕಾಶ ನೀಡಿದ್ದು, ಪಕ್ಷದ ಒಂದು ವಲಯದ ಮುಖಂಡರಿಗೆ ಇಷ್ಟವಾಗಿರಲಿಲ್ಲ.
ಅವರು ತಮ್ಮ ಶಕ್ತ್ಯಾನುಸಾರ ಸಾಕಷ್ಟು ಕಿರಿಕಿರಿ ಸೃಷ್ಟಿಸಿದರು. ನಿಗದಿಯಾಗಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರ‌್ಯಾಲಿಯನ್ನು ರದ್ದುಪಡಿಸಲಾಯಿತು. ಇನ್ನೇನು ಖಚಿತವಾಯಿತು ಎನ್ನುವಂತಿದ್ದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಾದಿ ಬದಲಾಯಿತು. ಇದೆಲ್ಲದರ ಹಿಂದೆ ಬಿಜೆಪಿಯ ಕೆಲವು ಮುಖಂಡರು ಕೆಲಸ ಮಾಡುತ್ತಿದ್ದರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಪ್ರಚಾರದ ಸಮಯವೇ ಮುಕ್ತಾಯವಾಗಿತ್ತು.

ಸಂಪನ್ಮೂಲ ಕೊರತೆ: ಬಿಜೆಪಿಯಿಂದ ಅಭ್ಯರ್ಥಿ ವೆಚ್ಚಕ್ಕೆ ನೀಡಿದ ಸಂಪನ್ಮೂಲ ಲೋಕಸಭಾ ಚುನಾವಣೆ ನಿಭಾಯಿಸಲು ಸಾಲುವಷ್ಟಿರಲಿಲ್ಲ. ಅದನ್ನು ಹಂಚಿಕೆ ಮಾಡಿಕೊಳ್ಳುವಲ್ಲಿಯೂ ಮುಖಂಡರ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದನ್ನು ಕಂಡರೂ ಕಾಣದಂತಿರುವ ಸ್ಥಿತಿ ಅಭ್ಯರ್ಥಿಯದ್ದಾಗಿತ್ತು. ವೈಯಕ್ತಿಕವಾಗಿ ವೆಚ್ಚ ಮಾಡಿದ ಸಂಪನ್ಮೂಲ ಜೆಡಿಎಸ್ ಅಭ್ಯರ್ಥಿಯ ಅಬ್ಬರಕ್ಕೆ ಸರಿಸಮನಾಗಿರಲಿಲ್ಲ.

ತವರಿನಲ್ಲಿಯೇ ಹಿನ್ನಡೆ: ಎ.ಮಂಜು ತಮ್ಮ ತವರು ವಿಧಾನಸಭಾ ಕ್ಷೇತ್ರ ಅರಕಲಗೂಡಿನಲ್ಲಿಯೇ ಹಿನ್ನಡೆ ಅನುಭವಿಸಿರುವುದು ವಿಧಾನಸಭಾ ಚುನಾವಣೆಯಲ್ಲಿನ ಅವರ ಸೋಲು ಜನರಲ್ಲಿ ಅನುಕಂಪ ಮೂಡಿಸಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಅರಕಲಗೂಡು ಕ್ಷೇತ್ರದಲ್ಲಿ 79,116 ಮತ ಪಡೆದಿರುವ ಅವರು 1696 ಮತಗಳ ಅಲ್ಪ ಹಿನ್ನಡೆ ಅನುಭವಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಅವರ ಮತಗಳಿಕೆ ಪ್ರಮಾಣ ಉತ್ತಮಗೊಂಡಿದೆ. ಆದರೆ, ಗೆಲುವಿನೆಡೆಗೆ ಚಿಮ್ಮಿಸುವಷ್ಟು ದೊಡ್ಡ ಪ್ರಮಾಣದ ಮುನ್ನಡೆ ನಿರೀಕ್ಷೆಯಲ್ಲಿದ್ದ ಅವರ ತವರಿನ ಬೆಂಬಲಿಗರಿಗೆ ಇದರಿಂದ ನಿರಾಸೆಯಾಗಿದೆ.

ಸ್ಟಾರ್ ಪ್ರಚಾರಕರ ಕೊರತೆ: ಆರಂಭದಲ್ಲಿ ಪ್ರಚಾರಕ್ಕೆ ಭಾರಿ ಹುರುಪು ತೋರಿದ ಬಿಜೆಪಿ ಮುಖಂಡರು ದಿನಗಳೆದಂತೆ ಆಸಕ್ತಿ ಕಳೆದುಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊರತುಪಡಿಸಿ ಬೇರೆ ಸ್ಟಾರ್ ಪ್ರಚಾರಕರು ಕ್ಷೇತ್ರದತ್ತ ಆಸಕ್ತಿ ವಹಿಸಲಿಲ್ಲ. ಕೆಲವು ಹೋಬಳಿಗಳಲ್ಲಿ ಒಂದು ದಿನದ ಪ್ರಚಾರ, ಕರಪತ್ರ ಹಂಚಿಕೆ ಕೆಲಸವೂ ವ್ಯವಸ್ಥಿತವಾಗಿ ನಡೆಯಲಿಲ್ಲ. ಹೀಗೆ ಎಲ್ಲ ಅಂಶಗಳು ಒಂದಕ್ಕೊಂದು ಬೆಸೆದುಕೊಂಡು ಭಾರಿ ನಿರೀಕ್ಷೆ ಮೂಡಿಸಿದ್ದ ಎ.ಮಂಜು ವರ್ಷದ ಅವಧಿಯಲ್ಲಿ 2ನೇ ಸೋಲು ಅನುಭವಿಸುವಂತಾಯಿತು.

Leave a Reply

Your email address will not be published. Required fields are marked *