More

  ಮೋದಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ

  ನರೇಂದ್ರ ಮೋದಿ ಅವರ ನೇತೃತ್ವದ ಎನ್​ಡಿಎಯನ್ನು ಮತ್ತೆ ಅಧಿಕಾರಕ್ಕೆ ಬರಲು ಬಿಡುವುದಿಲ್ಲ, ಇಂಡಿಯಾ ಒಕ್ಕೂಟಕ್ಕೆ ಆ ಶಕ್ತಿ ಗುಪ್ತಗಾಮಿನಿಯಂತೆ ದೇಶಾದ್ಯಂತ ಇದೆ. ಅಗೋಚರ ಮತದಾರರು ಮೋದಿಯ ದುರಾಡಳಿತದ ವಿರುದ್ಧ ಇದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಡುವಿಲ್ಲದೇ ದೇಶಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರು ವಿಜಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮೋದಿ ಸರ್ಕಾರದ ವೈಫಲ್ಯಗಳು, ಇಂಡಿಯಾ ಒಕ್ಕೂಟದ ಶಕ್ತಿ ಕುರಿತು ಮಾತನಾಡಿದರು.

  | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

  . ಇಂಡಿಯಾ ಒಕ್ಕೂಟಕ್ಕೆ ಅವಕಾಶ ಹೇಗಿದೆ?
  ದೇಶಾದ್ಯಂತ ಸಂಚರಿಸಿದಾಗ ನರೇಂದ್ರ ಮೋದಿ ವಿರೋಧಿ ಅಲೆ ಹಾಗೂ ಇಂಡಿಯಾ ಒಕ್ಕೂಟದ ಪರವಾದ ಅಲೆ ಅಂಡರ್ ಕರೆಂಟ್ ರೀತಿಯಲ್ಲಿರುವುದು ಕಂಡು ಬರುತ್ತದೆ. ಇದರಿಂದಾಗಿ ಒಕ್ಕೂಟದಲ್ಲಿರುವ ಮಿತ್ರ ಪಕ್ಷಗಳಿಗೆ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಗುತ್ತಿದೆ. ಮೋದಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆ ಹಿಡಿಯುತ್ತೇವೆ ಎಂಬ ವಿಶ್ವಾಸ ಮೂಡಿದೆ. ಹತ್ತು ವರ್ಷಗಳ ಸಾಧನೆಯನ್ನು ಮೋದಿ ಎಲ್ಲಾದರೂ ಹೇಳಿಕೊಂಡಿದ್ದಾರೆಯೇ? ಬರೀ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವುದೇ ಸಾಧನೆ ಎಂದು ಕೊಂಡಿದ್ದಾರೆ.

  . ಕಾಂಗ್ರೆಸ್​ಗೆ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದಿದೆ?
  ನಮ್ಮ ಮೊದಲ ಗುರಿ ಮೋದಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯುವುದಾಗಿದೆ. ಅದಕ್ಕಾಗಿ ನಮ್ಮ ಇಂಡಿಯಾ ಒಕ್ಕೂಟದಲ್ಲಿ ಒಡಕು ಮೂಡಬಾರದೆಂದು ಅನೇಕ ಕಡೆಗಳಲ್ಲಿ ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ರಾಜೀ ಮಾಡಿಕೊಂಡಿದ್ದೇವೆ.

  . ಮಮತಾ ಬ್ಯಾನರ್ಜಿ ಪ್ರತ್ಯೇಕ ಸ್ಪರ್ಧೆ ಮಾಡುತ್ತಿದ್ದಾರೆ?
  ಎಲ್ಲರೂ ನಮ್ಮ ಜತೆ ಇದ್ದಾರೆ. ಯಾರೋ ಒಂದಿಬ್ಬರು ದೂರವಾಗಿರಬಹುದು. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಲದಲ್ಲಿ ಪ್ರತ್ಯೇಕ ಸ್ಪರ್ಧೆ ಮಾಡಿದರೂ ಸಹ ಇಂಡಿಯಾ ಒಕ್ಕೂಟದ ಭಾಗವೆಂದೇ ಹೇಳಿದ್ದಾರೆ. ನಾವು, ಕಮ್ಯುನಿಸ್ಟರು ಒಟ್ಟಿಗೆ ಇರುವುದರಿಂದ ಅವರು ಪ್ರತ್ಯೇಕ ಸ್ಪರ್ಧೆ ಮಾಡಿದ್ದಾರೆ. ನಾವು ಒಂದಾಗಿದ್ದೇವೆ, ನಮ್ಮಲ್ಲಿ ಒಡಕಿಲ್ಲ.

  . ಇಷ್ಟು ವಿಶ್ವಾಸ ಇದ್ದರೂ ಪ್ರಧಾನಿ ಅಭ್ಯರ್ಥಿ ಏಕೆ ಘೋಷಣೆ ಮಾಡುತ್ತಿಲ್ಲ?
  ಯಾವುದೇ ಕಾರಣಕ್ಕೂ ನಮ್ಮಲ್ಲಿ ಒಡಕು ಬರಬಾರದು. ನಮ್ಮ ಗುರಿ ಮೊದಲು ಚುನಾವಣೆ ಗೆಲ್ಲುವುದು. ಆ ನಂತರ ಒಟ್ಟಿಗೆ ಕೂತು ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ನಮ್ಮಲ್ಲಿ ತಾಳ್ಮೆ ಮತ್ತು ಒಗ್ಗಟ್ಟು ಇದೆ. ಅದು ಕೊನೆಯ ತನಕ ಇರಬೇಕು.

  . ಕಾಂಗ್ರೆಸ್ ಗ್ಯಾರಂಟಿಗಳನ್ನು ಜನ ಕೈ ಹಿಡಿತಾರಾ?
  ನಾವು ಹಿಮಾಚಲ ಪ್ರದೇಶದಲ್ಲಿ ಮೊದಲು ಗ್ಯಾರಂಟಿ ಘೋಷಣೆ ಮಾಡಿದೆವು, ಕರ್ನಾಟಕದಲ್ಲಿ ಐದು ಒಟ್ಟಿಗೆ ಜಾರಿ ಮಾಡಿದ್ದೇವೆ. ತೆಲಂಗಾಣದಲ್ಲಿ ಜಾರಿ ಮಾಡಲಾಗಿದೆ. ಇದರಿಂದ ದೇಶಾದ್ಯಂತ ಜನರಲ್ಲಿ ಕಾಂಗ್ರೆಸ್​ನವರು ನುಡಿದಂತೆ ನಡೆಯುತ್ತಾರೆ ಎಂಬ ವಿಶ್ವಾಸ ಮೂಡಿದೆ. ಮಧ್ಯಪ್ರದೇಶದಲ್ಲಿ ಸೋಲಿಗೆ ಬೇರೆ ಕಾರಣಗಳೇ ಇವೆ.

  . ಗ್ಯಾರಂಟಿ ಜಾರಿಗೆ ಹಣಕಾಸು ಹೊಂದಾಣಿಕೆ ಹೇಗೆ?
  ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿಗಳನ್ನು ಜಾರಿಗೆ ಕೊಡುತ್ತೇವೆ. ಹೇಗೆ ಜಾರಿಗೆ ಕೊಡಬೇಕು ಎಂಬ ಬಗ್ಗೆ ಚಿದಂಬರಂ ನೇತೃತ್ವದಲ್ಲಿ ಐದು ಜನರ ಸಮಿತಿ ರಚನೆ ಮಾಡಲಾಗಿದೆ. ನಾನು ಹಾಗೂ ರಾಹುಲ್ ಗಾಂಧಿ ಸಹಿ ಮಾಡಿಕೊಟ್ಟಿರುವ ಕಾರ್ಡ್​ಗಳನ್ನು ಮನೆಮನೆಗೆ ಹಂಚಿದ್ದೇವೆ. ವೆಚ್ಚ ಹೇಗೆ? ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂಬ ಬಗ್ಗೆ ಚರ್ಚೆ ಮಾಡಿಯೇ ಘೋಷಣೆ ಮಾಡಿದ್ದೇವೆ.

  . ನಮ್ಮ ಪ್ರಣಾಳಿಕೆಯ ಬಗ್ಗೆಯೇ ಮೋದಿ ಟೀಕೆ ಮಾಡಿದ್ದಾರೆ?
  ನಾವು ಹೇಳಿರುವುದು ಜಾತಿಗಣತಿಯ ಬಗ್ಗೆ. ಇದರಿಂದ ಸಾಮಾಜಿಕ ನ್ಯಾಯಕ್ಕೆ ಅನುಕೂಲವಾಗುತ್ತದೆ. ಆದರೆ ಮೋದಿ ತಮ್ಮ ಬುದ್ದಿ ಉಪಯೋಗಿಸಿ ಮಾತನಾಡದೇ ಹತಾಶರಾಗಿ ತಾಳಿ ಕಿತ್ತು ಕೊಡುತ್ತಾರೆ ಎಂಬ ಮಾತನ್ನು ಹೇಳುತ್ತಾರೆ. ಅವರಿಗೆ ಸೋಲಿನ ಹತಾಶೆ ಕಾಡುತ್ತಿದೆ ಅದರಿಂದಲೇ ಅವರು ದ್ವೇಷ ಹಾಗೂ ಪ್ರಚೋದನಕಾರಿ ಮಾತುಗಳ ಮೂಲಕ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ.

  . ಎನ್​ಡಿಎ ಈ ಬಾರಿ 400 ಸ್ಥಾನ ಪಡೆಯುತ್ತದೆ ಎಂಬ ವಿಶ್ವಾಸದಲ್ಲಿದೆ?
  ಮೋದಿಗೆ ಇಂಡಿಯಾ ಒಕ್ಕೂಟ ಕಂಡರೆ ಭಯ ಅದಕ್ಕಿಂತ ಹೆಚ್ಚಾಗಿ ಹೊಟ್ಟೆಕಿಚ್ಚು. ಆದ್ದರಿಂದಲೇ ಜನರಲ್ಲಿ ತಪು್ಪ ಭಾವನೆ ಮೂಡಿಸಲು ಆ ರೀತಿ ಹೇಳುತ್ತಾರೆ. ಅವರಿಗೆ 400 ಸ್ಥಾನ ಪಡೆಯುವ ವಿಶ್ವಾಸ ಇದ್ದಿದ್ದರೆ ಬೇರೆ ಪಕ್ಷದವರನ್ನು ಏಕೆ ಬಿಜೆಪಿಗೆ ಸೆಳೆಯುತ್ತಿದ್ದರು.

  . ಚುನಾವಣೆಯಲ್ಲಿ ದೇಶಾದ್ಯಂತ ಚರ್ಚೆಯಾಗುತ್ತಿರುವ ಪ್ರಮುಖ ಸಂಗತಿಗಳೇನು?
  ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ, ರೈತರ ಸಮಸ್ಯೆ, ಎಂಎಸ್​ಪಿ ನೀಡದಿರುವುದು, ಪರಿಶಿಷ್ಟರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ, ಸಂವಿಧಾನ ಬದಲಾವಣೆ ಮಾಡುವುದಾಗಿ ಮಾತನಾಡುತ್ತಿರುವುದು, ದ್ವೇಷದ ಭಾಷಣ, ಸಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ತೆಗೆದು ದುರ್ಬಲ ಮಾಡಿರುವುದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ, ತನಗೆ ಬೇಕಾದವರಿಗೆ ಪ್ರಮುಖ ಹುದ್ದೆ, ಮಿತಿ ಮೀರಿರುವ ಭ್ರಷ್ಟಾಚಾರ ಸೇರಿ 100ಕ್ಕೂ ಮಿಕ್ಕು ವಿಚಾರಗಳು ಚರ್ಚೆಯಾಗುತ್ತಿವೆ.

  ಮೋದಿ ಅಧಿಕಾರಕ್ಕೆ ಬರಲು ಬಿಡುವುದಿಲ್ಲ

  . ಕರ್ನಾಟಕದಲ್ಲಿ ಗ್ಯಾರಂಟಿಗಳಿಂದ ಅಭಿವೃದ್ಧಿ ನಿಂತಿದೆ?
  ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಲಾಗಿದೆ. ನಿರಂತರವಾಗಿ ಆಗುವ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ನಾವು ಭರವಸೆ ನೀಡಿರುವ ಯೋಜನೆಗಳನ್ನು ಇಲ್ಲಿನ ಸರ್ಕಾರ ಸಂಪನ್ಮೂಲ ಕ್ರೋಡೀಕರಿಸಿ ಹಂತಹಂತವಾಗಿ ಜಾರಿ ಮಾಡುತ್ತದೆ.

  ಅಧ್ಯಕ್ಷನಾಗಿ ಜವಾಬ್ದಾರಿಗಳಿವೆ

  . ಬಾರಿ ಖರ್ಗೆ ಅವರು ಏಕೆ ಚುನಾವಣೆಗೆ ಸ್ಪರ್ಧಿಸಲಿಲ್ಲ?
  ನಾನು ಈಗ ಕಾಂಗ್ರೆಸ್ ಅಧ್ಯಕ್ಷ. ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಅಗತ್ಯ ಇರುವ ಕಡೆ ಹೋಗಬೇಕಾಗುತ್ತದೆ. ಇದುವರೆಗೂ 40 ಸಭೆಗಳಲ್ಲಿ ಭಾಗವಹಿಸಿದ್ದೇವೆ. ಕಳೆದ ಬಾರಿ ಸೋತ ಮಾತ್ರಕ್ಕೆ ಹೆದರಿಲ್ಲ. ಕರ್ನಾಟಕಕ್ಕೆ ಸೀಮಿತವಾಗಬಾರದೆಂದು ಸ್ಪರ್ಧೆ ಮಾಡಲು ಆಗಿಲ್ಲ. ರಾಜ್ಯದಲ್ಲಿ, ಕೇಂದ್ರದಲ್ಲಿ ಮಂತ್ರಿ, ಪ್ರತಿಪಕ್ಷದ ನಾಯಕ, ಪಕ್ಷದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವಾಗ ರಾಜ್ಯಕ್ಕೆ ಎಲ್ಲಿಯೂ ಅಗೌರವ ತರುವ ಕೆಲಸ ಮಾಡಿಲ್ಲ. ಭ್ರಷ್ಟಾಚಾರ ಸಹ ಮಾಡಿಲ್ಲ.

  ಕುಟುಂಬ ರಾಜಕಾರಣವಿಲ್ಲ

  . ಟೆಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್​ನಲ್ಲಿ ಕುಟುಂಬ ರಾಜಕಾರಣ ಇದೆ?
  ಜಿಲ್ಲಾ ಸಮಿತಿಗಳು ಹೆಸರು ಕಳುಹಿಸಿಕೊಡುತ್ತಾರೆ, ಅದನ್ನು ಪಿಸಿಸಿಯ ಸಮಿತಿ, ರಾಜ್ಯ ಚುನಾವಣಾ ಸಮಿತಿ, ಪರಿಶೀಲನಾ ಸಮಿತಿ ನೋಡಿದ ನಂತರ ಕೇಂದ್ರಕ್ಕೆ ಕಳುಹಿಸುತ್ತಾರೆ. ಜಿಲ್ಲೆಗಳಿಗೆ ವೀಕ್ಷಕರು ಹೋಗಿ ಬಂದಿರು ತ್ತಾರೆ. ಸರ್ವೆ ಸಹ ಮಾಡಿಸಿದ್ದೇವೆ. ಅದೆಲ್ಲವನ್ನೂ 12 ಜನರ ಕೇಂದ್ರ ಚುನಾವಣಾ ಸಮಿತಿ ಪರಿಶೀಲನೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts