ರಾಜ್ಯಾದ್ಯಂತ ಮೋದಿ ಸಪ್ತ ಸಮಾವೇಶ

ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿರುವ ಬಿಜೆಪಿ, ಅಧಿಸೂಚನೆ ಹೊರಬೀಳುವುದಕ್ಕೂ ಮೊದಲೇ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಏಳು ರ‍್ಯಾಲಿ ಆಯೋಜಿಸಲು ತೀರ್ವನಿಸಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ರಾಜ್ಯದಲ್ಲಿ 23 ರ್ಯಾಲಿಗಳಲ್ಲಿ ಭಾಗವಹಿಸಿದ್ದರು. ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಬಳಿಕ ಹೆಚ್ಚಿನ ರ್ಯಾಲಿಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಧಿಸೂಚನೆಗೂ ಮುನ್ನವೇ ಮೋದಿ ವರ್ಚಸ್ಸಿನ ಲಾಭ ಪಡೆದು ಭೂಮಿಕೆ ಸಿದ್ಧಪಡಿಸುವುದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಯೋಜನೆಯಾಗಿದೆ.

ಅಮಿತ್ ಷಾ ಬಿಎಸ್​ವೈ ಭೇಟಿ: ಏತನ್ಮಧ್ಯೆ ಮಂಗಳವಾರ ದೆಹಲಿಗೆ ತೆರಳಿದ್ದ ಬಿ.ಎಸ್.ಯಡಿಯೂರಪ್ಪ, ಅಮಿತ್ ಷಾ ಜತೆಗೆ ಚುನಾವಣೆ ತಯಾರಿ, ಟಿಕೆಟ್ ಹಂಚಿಕೆ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಯಾವೆಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎಂಬ ಮಾಹಿತಿಯನ್ನು ಅಮಿತ್ ಷಾ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರದ ವರಿಷ್ಠರೇ ರಾಜ್ಯದಲ್ಲಿ ಸಂಪೂರ್ಣ ಹೊಣೆ ಹೊತ್ತಿದ್ದರು. ಆದರೆ ಈಗ ರಾಜ್ಯ ಮುಖಂಡರಿಗೆ ಜವಾಬ್ದಾರಿ ನೀಡದಿದ್ದರೆ ತಪು್ಪ ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ಚುನಾವಣೆ ನೇತೃತ್ವವನ್ನು ಯಡಿಯೂರಪ್ಪ ಅವರಿಗೆ ವಹಿಸಲು ವರಿಷ್ಠರು ಒಪ್ಪಿದ್ದಾರೆ. ಜ.9ರಂದು ಅಮಿತ್ ಷಾ ತುಮಕೂರಿನಲ್ಲಿ ನಡೆಸಬೇಕಿದ್ದ ಸಭೆ ಮುಂದೂಡಿಕೆಯಾಗಿತ್ತು. ಬಿಎಸ್​ವೈ ಇನ್ನೂ ಒಂದೆರಡು ದಿನ ದೆಹಲಿಯಲ್ಲಿದ್ದು ಮೋದಿ ರ‍್ಯಾಲಿ ಹಾಗೂ ಷಾ ತುಮಕೂರು ಭೇಟಿ ದಿನಾಂಕ ನಿಗದಿ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಎಲ್ಲಿ ಯಾವ ರ‍್ಯಾಲಿ

ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಸಮುದಾಯಗಳ ಸಮಾವೇಶ ನಡೆಸಿ ಕೇಂದ್ರ ಸರ್ಕಾರ ಆ ಸಮುದಾಯಗಳ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳನ್ನು ಜನರ ಮುಂದಿಡುವುದು ವರಿಷ್ಠರ ಗುರಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ಕಳೆದ ಬಾರಿ ಸೋತಿದ್ದ ತುಮಕೂರು, ಚಿತ್ರದುರ್ಗ ಕ್ಷೇತ್ರ ಮರಳಿ ಗೆಲ್ಲಲು ತಂತ್ರ ರೂಪಿಸಿದೆ. ಕಲಬುರಗಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ರಣತಂತ್ರ ರೂಪಿಸಲಾಗಿದೆ.