ಮುಖ ತೋರಿಸಲಾಗದ ಸ್ಥಿತಿಯಲ್ಲಿ ಶೋಭಾ

ಚಿಕ್ಕಮಗಳೂರು: ಜನರಿಗೆ ಮುಖ ತೋರಿಸಿಕೊಳ್ಳಲಾಗದೆ ಮೋದಿ ಮುಖ ನೋಡಿ ವೋಟು ಹಾಕಿ ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕೇಳುತ್ತಿರುವುದು ಹಾಸ್ಯಾಸ್ಪದ ಎಂದು ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಲೇವಡಿ ಮಾಡಿದರು.

ತಾಲೂಕಿನ ವಿವಿಧೆಡೆ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭ ಬೀಕನಹಳ್ಳಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಂಗಳವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ನಮ್ಮ ಕುಟುಂಬದ 60 ವರ್ಷದ ರಾಜಕೀಯ ಸೇವೆಯಲ್ಲಿ ಯಾರಿಂದಲೂ ನಯಾಪೈಸೆ ಲಂಚ ಪಡೆದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೇಳುತ್ತೇನೆ. ನಾವು ಸಾಧ್ಯವಾದಾಗ ದಾನ-ಧರ್ಮ ಮಾಡಿದ್ದೇವೆ. ಯಾರ ಮುಂದೆಯೂ ಕೈಚಾಚದೆ ರಾಜಕೀಯದಲ್ಲಿ ಶುದ್ಧ ಹಸ್ತದಿಂದ ಸೇವೆ ಮಾಡುತ್ತಿರುವುದಾಗಿ ಹೇಳಿದರು.

ಕಸ್ತೂರಿ ರಂಗನ್ ವರದಿ ಜಾರಿ ಸನ್ನಿಹಿತವಾಗಿದೆ. ಅದು ಬಂದರೆ ರಸ್ತೆ ನಿರ್ವಿುಸುವಂತಿಲ್ಲ. ಬೋರ್​ವೆಲ್ ಕೊರೆಯುವಂತಿಲ್ಲ. ಮನೆ ಕಟ್ಟುವ ಹಾಗಿಲ್ಲ. ಈ ರೀತಿ ಅರ್ಧ ಜಿಲ್ಲೆ ನಾಶವಾಗುತ್ತದೆಂಬುದನ್ನು ಮನಗಂಡು ಅದನ್ನು ಜಾರಿಗೆ ತರಬೇಡಿ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ರಮಾನಾಥ ರೈ ಅಂದಿನ ಪರಿಸರ ಮಂತ್ರಿಯಾಗಿದ್ದರು. ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಚಿಕ್ಕಮಗಳೂರು ಜಿಲ್ಲೆಗೆ ಮಾರಕ ಎಂಬ ಅರಿವು ನಮಗಿತ್ತು. ಕೇಂದ್ರ ಸರ್ಕಾರ ಈ ಬಗ್ಗೆ ಚರ್ಚೆ ಮಾಡಲು ಎಲ್ಲ ಸಂಸದರ ಸಭೆ ಕರೆದಿತ್ತು. ಇಲ್ಲಿನ ಸಂಸದರು ಅಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಮಾಡಬೇಡಿ ಎಂದು ಧ್ವನಿ ಎತ್ತಬೇಕಿತ್ತು. ಆದರೆ ಆ ಸಭೆಗೇ ಅವರು ಗೈರಾಗಿದ್ದಿದ್ದು ವಿಪರ್ಯಾಸವೇ ಸರಿ. ಇಲ್ಲಿನ ಜನರ ಜೀವನ್ಮರಣದ ಜತೆೆ ಅವರು ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಹಿರಿಯರೊಬ್ಬರು ಹಾರ ಹಾಕಿದ ಸಂದರ್ಭದಲ್ಲಿ ಪ್ರಮೋದ್ ಮಧ್ವರಾಜ್ ಪಾದಕ್ಕೆರಗಿ ನಮಸ್ಕರಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಪಾಪುರ ಮಂಜೇಗೌಡ, ನಗರಸಭೆ ಮಾಜಿ ಸದಸ್ಯ ರೂಬಿನ್ ಮೊಸಸ್, ಸಿಲ್ವರ್​ಸ್ಟರ್, ರಸೂಲ್ ಖಾನ್, ಸಿಪಿಐ ರಘು, ಜೆಡಿಎಸ್ ನಾರಾಯಣಮೂರ್ತಿ, ಲಕ್ಷ್ಮಣ್, ಸೋಮೇಗೌಡ, ಭೈರೇಗೌಡ ಮತ್ತಿತರರಿದ್ದರು.

ಸಾಧನೆ ನೋಡಿ ಮತ ನೀಡಿ: ಸಂದಿಗ್ಧ ಕಾಲಘಟ್ಟದಲ್ಲಿ ಜಾತ್ಯತೀತ ಶಕ್ತಿಗಳ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಜನರ ಮುಂದೆ ನಿಂತಿದ್ದಾರೆ. ದೇಶದಲ್ಲಿ ಈ ಚುನಾವಣೆಯಲ್ಲಿ ಯಾಕೆ ನಾವು ಮೈತ್ರಿಕೂಟದ ಅಭ್ಯರ್ಥಿ ಬೆಂಬಲಿಸಬೇಕು ಎಂಬ ವಿಚಾರ ಚರ್ಚೆ ಮಾಡಬೇಕು. ಯುಪಿಎ ಸರ್ಕಾರದಲ್ಲಿ ಸಾಲಮನ್ನಾದಿಂದ ಬಹಳಷ್ಟು ಉಪಯೋಗವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಇಂದಿನ ಮೈತ್ರಿ ಸರ್ಕಾರದ ಸಾಧನೆ, ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಪ್ರಮೋದ್ ಮಧ್ವರಾಜ್ ಅವರನ್ನು ಬೆಂಬಲಿಸುವಂತೆ ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮನವಿ ಮಾಡಿದರು.