ಮೋದಿ-ಟ್ವಿಟರ್​ ಸಿಇಒ ಭೇಟಿ: ಸುಳ್ಳು ಸುದ್ದಿ ತಡೆಯುವ ಬಗ್ಗೆ ಚರ್ಚೆ

ನವದೆಹಲಿ: ಸಾಮಾಜಿ ಜಾಲತಾಣ ಟ್ವಿಟರ್​ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಜಾಕ್​ ಡಾರ್ಸೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿಯಾಗಿ ಚರ್ಚೆ ನಡೆಸಿದರು.

ಪ್ರಧಾನಿ ನಿವಾಸದಲ್ಲಿ ನಡೆದ ಈ ಭೇಟಿಯಲ್ಲಿ ಸುಳ್ಳು ಸುದ್ದಿಯ ಹರಡುವಿಕೆ ತಡೆಯಲು ಸರ್ಕಾರ ಮತ್ತು ಸಂಸ್ಥೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಭಾರತದಲ್ಲಿ ಹೂಡಿಕೆಯ ಕುರಿತು ಇಬ್ಬರೂ ಚರ್ಚೆ ನಡೆಸಿದ್ದಾರೆ.

ಭೇಟಿ ನಂತರ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ” ಜಾಕ್​ ಭೇಟಿ ಖುಷಿ ನೀಡಿತು. ಸಂಸ್ಥೆಯ ಉನ್ನತ ಸ್ಥಾನದಲ್ಲಿರುವ ಅವರ ಉತ್ಸಾಹ ನನಗೆ ಹಿಡಿಸಿತು. ಟ್ವಿಟರ್​ ಅನ್ನು ನಾನು ಸಂಭ್ರಮಿಸುತ್ತೇನೆ. ಅಲ್ಲಿ ನನಗೆ ನಿತ್ಯವೂ ಹಲವು ಸ್ನೇಹಿತರು ಮತ್ತು ಕ್ರಿಯಾಶೀಲ ವ್ಯಕ್ತಿಗಳು ಕಾಣ ಸಿಗುತ್ತಾರೆ,” ಎಂದು ಟ್ವೀಟ್​ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಟಿರ್​ ಸಿಇಒ ಡಾರ್ಸೆ, “ನಮ್ಮಿಬ್ಬರ ನಡುವಿನ ಸಂಭಾಷಣೆಯನ್ನು ನಾನು ಸಂಭ್ರಮಿಸಿದ್ದೇನೆ. ಟ್ವಿಟರ್​ ಕುರಿತ ನಿಮ್ಮ ಕಲ್ಪನೆಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ,” ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇದಕ್ಕೂ ಹಿಂದೆ ಟ್ವಿಟರ್​ ಸಿಇಒ ಜಾಕ್​ ಅವರು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನೂ ಭೇಟಿಯಾಗಿದ್ದರು.

ರಾಹುಲ್​ ಗಾಂಧಿ-ಟ್ವಿಟರ್​ ಸಿಇಒ ಭೇಟಿ: ಸುಳ್ಳು ಸುದ್ದಿ ತಡೆಯುವ ಕುರಿತು ಚರ್ಚೆ