ಪ್ರಧಾನಿ ನರೇಂದ್ರ ಮೋದಿ ಕೈ ಸೇರಿದ ಕಾಫಿನಾಡಿನ ಯುವಕನ ಕಲೆ

ಬಾಳೆಹೊನ್ನೂರು: ಕಾಫಿನಾಡಿನ ಪುಟ್ಟ ಗ್ರಾಮವೊಂದರ ಯುವಕನೊಬ್ಬ ರಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಮೋದಿ ಕೈಸೇರಿ ಮೆಚ್ಚುಗೆಗೆ ಪಾತ್ರವಾಗಿದೆ.

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಬಿದರೆ-ಸಂಗಮೇಶ್ವರಪೇಟೆಯ ಚನ್ನಪ್ಪ ಗೌಡ-ಸಾವಿತ್ರಿ ದಂಪತಿ ಪುತ್ರ ವಿ.ಸಿ.ಸುಜಿತ್ ಪ್ರಧಾನಿಯ ಚಿತ್ರ ಬಿಡಿಸಿ ಶಹಬ್ಬಾಸ್​ಗಿರಿ ಪಡೆದವರು. ಸುಜಿತ್ ರಚಿಸಿದ್ದ ಮೋದಿ ಅವರ ಚಿತ್ರವನ್ನೇ ಬೆಂಗಳೂರಿನಲ್ಲಿ ನಡೆದ ಲೋಕಸಭಾ ಚುನಾವಣೆಯ ಬಿಜೆಪಿ ಸಮಾವೇಶದಲ್ಲಿ ಮೋದಿ ಅವರಿಗೆ ಸ್ಮರಣಿಕೆಯಾಗಿ ನೀಡಲಾಗಿದೆ.

ಸುಜಿತ್​ಗೆ ಬಾಲ್ಯದಿಂದಲೂ ಚಿತ್ರಕಲೆ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಸಣ್ಣಪುಟ್ಟ ಚಿತ್ರಗಳನ್ನು ರಚಿಸುತ್ತ ವಿವಿಧ ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ, ಚಿತ್ರಕಲೆಯನ್ನೇ ಹವ್ಯಾಸವಾಗಿ ರೂಢಿಸಿಕೊಂಡರು. ಪ್ರಾಥಮಿಕ, ಪ್ರೌಢಶಾಲೆ, ಬಿಕಾಂ ಪದವಿ ಬಳಿಕ ಸುಜಿತ್ ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಮೈಸೂರು ವಿವಿಯಿಂದ ಬೆಂಗಳೂರಿನ ಆನಿಮಾಸ್ಟರ್ ಕಾಲೇಜಿನಲ್ಲಿ ವಿಸ್ಯುವಲ್ ಆರ್ಟ್ಸ್​ನಲ್ಲಿ ಮಾಸ್ಟರ್ ಡಿಗ್ರಿ ಮಾಡುತ್ತಿದ್ದಾರೆ.

ಹೀಗೆ ಚಿತ್ರಕಲೆ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತಿರುವ ಇವರು ಇದುವರೆಗೂ 300ಕ್ಕೂ ಅಧಿಕ ಚಿತ್ರಗಳನ್ನು ಬಿಡಿಸಿದ್ದಾರೆ. ಇದುವರೆಗೆ ವಿವಿಧ ಮಠಾಧೀಶರು, ನಟ, ನಟಿಯರು, ನೋಟುಗಳು, ಪ್ರಕೃತಿ, ಪ್ರಾಣಿ, ಪಕ್ಷಿ ಸೇರಿ ಹಲವು ಚಿತ್ರಗಳನ್ನು ರಚಿಸಿದ್ದಾರೆ. ಹೀಗೆ ರಚಿಸಿದ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರವೂ ಪ್ರಮುಖವಾದುದು.

ಮೋದಿ ಚಿತ್ರವನ್ನು ಹೇಗಾದರೂ ಮಾಡಿ ನರೇಂದ್ರ ಮೋದಿ ಕೈಸೇರಿಸಬೇಕು ಎಂಬ ಹೆಬ್ಬಯಕೆ ಸುಜಿತ್ ಅವರಿಗಿತ್ತು. ಇದನ್ನು ತಮ್ಮ ಸ್ನೇಹಿತರ ಬಳಿಯೂ ಹಲವು ಬಾರಿ ಹೇಳಿಕೊಂಡಿದ್ದರು. ಪರಿಚಯಸ್ಥರ ಮೂಲಕ ತಮ್ಮ ಆಸೆಯನ್ನು ಶಾಸಕ ಅಶ್ವತ್ಥನಾರಾಯಣ ಅವರಿಗೆ ಸುಜಿತ್ ತಲುಪಿಸಿದ್ದರು. ಅದರಂತೆ ಶಾಸಕ ಅಶ್ವತ್ಥನಾರಾಯಣ ಅವರು ಸುಜಿತ್ ರಚಿಸಿದ್ದ ಮೋದಿ ಅವರ ಭಾವಚಿತ್ರವನ್ನು ಮೋದಿಗೆ ತಲುಪಿಸುವುದಾಗಿ ಪಡೆದಿದ್ದರು. ಸುಯೋಗ ಎನ್ನುವಂತೆ ಬೆಂಗಳೂರಿಗೆ ಪ್ರಚಾರಕ್ಕೆ ಆಗಮಿಸಿದ್ದ ಮೋದಿ ಅವರಿಗೆ ಸುಜಿತ್ ಬರೆದಿದ್ದ ಭಾವಚಿತ್ರವನ್ನೇ ಸ್ಮರಣಿಕೆಯಾಗಿ ನೀಡಲಾಯಿತು. ಹೀಗೆ ಪುಟ್ಟ ಹಳ್ಳಿಯೊಂದರ ಯುವಕ ರಚಿಸಿದ್ದ ಚಿತ್ರವೊಂದು ಕಟ್ಟಕಡೆಗೂ ದೇಶದ ಪ್ರಧಾನಿ ಕೈತಲುಪಿ ದೆಹಲಿ ತಲುಪಿ ಸಾರ್ಥಕತೆ ಕಂಡಿದೆ.

ಸುಜಿತ್ ಶೃಂಗೇರಿಯ ಸ್ಪೂರ್ತಿ ಯುವಕ ಸಂಘದ ಸದಸ್ಯರಾಗಿದ್ದು, ಆ ಸಂಘದ ಮೂಲಕ ಮರಗಾಲು ನೃತ್ಯ ಕಲಿತು, ಶೃಂಗೇರಿಯಲ್ಲಿ ನಡೆಯುವ ನವರಾತ್ರಿ, ವಿವಿಧೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ಮರಗಾಲು ನೃತ್ಯವನ್ನೂ ಪ್ರದರ್ಶಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿಯೂ ಅಭಿನಯಿಸಿದ್ದಾರೆ.