ಶ್ರೀಗಳ ಕ್ರಿಯಾ ಸಮಾಧಿ ಪ್ರಕ್ರಿಯೆಗೆ ಮೋದಿ ಗೈರು: ನಿರ್ಮಲಾ ಸೀತಾರಾಮನ್​ ಕೇಂದ್ರದ ಪ್ರತಿನಿಧಿ

ಬೆಂಗಳೂರು: ಕಾಯಕ ಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿ ಪ್ರಕ್ರಿಯೆ ಇಂದು ಸಂಜೆ ಐದು ಗಂಟೆಗೆ ನೆರವೇರುತ್ತಿದೆ.

ಕಾರಣಾಂತರಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ಈ ವಿದ್ಯಮಾನಕ್ಕೆ ಗೈರಾಗುತ್ತಿದ್ದು, ಕೇಂದ್ರದ ಪ್ರತಿನಿಧಿಯಾಗಿ ನಿರ್ಮಲಾ ಸೀತಾರಾಮನ್​ ಅವರನ್ನು ನಿಯೋಜಿಸಿದ್ದಾರೆ.

ಈಗಾಗಲೇ ತುಮಕೂರಿಗೆ ಆಗಮಿಸಿರುವ ಅವರು, ಇನ್ನು ಕೆಲವೇ ಕ್ಷಣಗಳಲ್ಲಿ ಮಠಕ್ಕೆ ತೆರಳಿ ಶ್ರೀಗಳ ಲಿಂಗ ಶರೀರದ ದರ್ಶನ ಪಡೆದುಕೊಳ್ಳಲಿದ್ದಾರೆ.

ಸೋಮವಾರ ಮಧ್ಯಾಹ್ನ ಶ್ರೀಗಳ ದೇಹತ್ಯಾಗದ ಸುದ್ದಿ ತಿಳಿಯುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ದರ್ಶನಕ್ಕೆ ಬರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದವು. ಆದರೆ, ಭದ್ರತಾ ಕಾರಣಗಳಿಂದಾಗಿ ಅವರು ಶ್ರೀಗಳ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಬಿಜೆಪಿ ತಿಳಿಸಿದೆ.

ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿಗೆ ವಿಶೇಷ ಭದ್ರತಾ ಪಡೆ (ಎಸ್​ಪಿಜಿ) ಅಸಮ್ಮತಿ ಸೂಚಿಸಿದೆ ಎಂದು ಹೇಳಲಾಗಿದೆ.