ಪ್ರಧಾನಿ ಮೋದಿ ಫೋಟೋ ಎಡಿಟ್​ ಮಾಡಿ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದವ ಬಂಧನ

ಇಂದೋರ್​: ಪ್ರಧಾನಿ ಮೋದಿಯವರು ದಾವೂದಿ ಬೋಹ್ರಾ ಇಸ್ಲಾಂ ಸಮುದಾಯದ ಟೋಪಿ ಧರಿಸಿರುವಂತೆ ರೂಪಾಂತರ ಮಾಡಿರುವ ಫೋಟೋವನ್ನು ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದ ಇಂದೋರ್​ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಾವೂದಿ ಬೋಹ್ರಾ ಸಮುದಾಯದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಇಸ್ಲಾಮರ ಟೋಪಿ ಹಾಕಿಕೊಂಡು ಶುಭಕೋರುತ್ತಿರುವಂತೆ ಫೋಟೋ ಎಡಿಟ್​ ಮಾಡಲಾಗಿದ್ದು ಅದನ್ನು ಫೇಸ್​ಬುಕ್​ನಲ್ಲಿ ಬಾಲಮುಕುಂದ ಸಿಂಗ್​ ಗೌತಮ್​ ಎಂಬುವರು ಶೇರ್​ ಮಾಡಿದ್ದರು. ಅವರ ವಿರುದ್ಧ ಬಿಜೆಪಿ ಮುಖಂಡ ಶಂಕರ್​ ಲಾಲ್​ವಾನಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಲಮುಕುಂದ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮೋದಿಯವರ ಫೋಟೋ ಹೀಗೆ ಎಡಿಟ್​ ಮಾಡಿ ಶೇರ್​ ಮಾಡಿದ್ದು ಬಾಲಮುಕುಂದ್​ ಎಂಬುದನ್ನು ಸೈಬರ್​ ಸೆಲ್​ ಪೊಲೀಸರು ಖಚಿತ ಪಡಿಸಿದ್ದರು ಎನ್ನಲಾಗಿದೆ.

ಪ್ರಧಾನಿ ಮೋದಿ ಸೆ.14ರಂದು ಸೈಫಿ ಮಸೀದಿಯಲ್ಲಿ ನಡೆದ ದಾವೂದಿ ಬೋಹ್ರಾ ಸಮುದಾಯದ ಆಶ್ರಾ ಮುಬಾರಕ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಟೋಪಿ ಧರಿಸಿರಲಿಲ್ಲ. ಆದರೂ ಫೋಟೋವನ್ನು ಎಡಿಟ್​ ಮಾಡಲಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಶಂಕರ್​ ಲಾಲ್​ವಾನಿ ಪೊಲೀಸರಿಗೆ ದೂರು ನೀಡಿದ್ದರು.