ರಾಜೀನಾಮೆ ಅಂಗೀಕರಿಸಿ ಟ್ವೀಟ್​ ಮಾಡಿದ ರಾಷ್ಟ್ರಪತಿ ಅವರಿಗೆ ಕವಿಹೃದಯಿ ಪ್ರಧಾನಿ ಮೋದಿ ಕೊಟ್ಟ ಉತ್ತರ…

ನವದೆಹಲಿ: ಲೋಕಸಭೆ ಚುನಾವಣೆ 2019ರ ಪ್ರಕ್ರಿಯೆಗೆ ತೆರೆಬಿದ್ದು ಕೆಲಗಂಟೆಗಳು ಕಳೆದಿವೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿ, 16ನೇ ಲೋಕಸಭೆಯನ್ನು ಬರ್ಖಾಸ್ತುಗೊಳಿಸಿ, 17ನೇ ಲೋಕಸಭೆ ಸ್ಥಾಪನೆಗೆ ದಾರಿ ಮಾಡಿಕೊಟ್ಟಿದ್ದಾರೆ.

ಈ ಬಾರಿ ಭರ್ಜರಿ ಬಹುಮತದೊಂದಿಗೆ ಸ್ವತಃ ಅವರೇ ಪ್ರಧಾನಿಯಾಗಿ ಮುಂದುವರಿಯಲಿದ್ದರೂ, ಔಪಚಾರಿಕತೆಗಾಗಿ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಶುಕ್ರವಾರ ರಾಜೀನಾಮೆ ಸಲ್ಲಿಸಿದರು. ಇದನ್ನು ಅಂಗೀಕರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ ಟ್ವೀಟ್​ ಮೂಲಕ ಈ ವಿಷಯ ತಿಳಿಸಿ, 17ನೇ ಲೋಕಸಭೆ ಅಸ್ತಿತ್ವಕ್ಕೆ ಬರುವವರೆಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವಂತೆ ನರೇಂದ್ರ ಮೋದಿ ಅವರಿಗೆ ಸೂಚಿಸಿ ಟ್ವೀಟ್​ ಮಾಡಿದರು.

ಇದನ್ನು ಓದಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಹಠಾತ್ತನೆ ಕವಿಯೊಬ್ಬ ಜಾಗೃತಗೊಂಡಿದ್ದಾನೆ. ಅದರಂತೆ ಅವರು ‘ಸೂರ್ಯ ತನ್ನ ನಿಯಮಾನುಸಾರ ಮುಳುಗುತ್ತಾನೆ… ಆದರೆ, ನಾವು ಮಾಡಿದ ಕೆಲಸಗಳು ಉಜ್ವಲವಾಗಿ ಪ್ರಜ್ವಲಿಸುತ್ತಾ ಕೋಟ್ಯಂತರ ಮನೆ, ಮನಗಳನ್ನು ಬೆಳಗುತ್ತವೆ… ಹೊಸ ಬೆಳಗು ಹೊಸ್ತಿಲಲ್ಲಿದ್ದು… ಹೊಸ ಕಾಲಾವಧಿ ನಮಗಾಗಿ ಎದುರು ನೋಡುತ್ತಿದೆ…’ ಎಂದು ಕವಿತೆಯ ಮೂಲಕ ರಾಷ್ಟ್ರಪತಿ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೆ ಕೃತಜ್ಞತೆ ಅರ್ಪಣೆ
ರಾಷ್ಟ್ರಪತಿ ಭವನದಿಂದ ಮರಳಿದ ಪ್ರಧಾನಿ ಮೋದಿ, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಒಡನಾಡಿದರು. ತಮ್ಮ ಐದು ವರ್ಷಗಳ ಕಾರ್ಯಾವಧಿಯಲ್ಲಿ ಸಹಕರಿಸಿದ್ದಕ್ಕಾಗಿ ಕೃತಜ್ಞತೆ ಅರ್ಪಿಸಿದರು. ವೃತ್ತಿಪರತೆ ಮತ್ತು ಸಾಂಘಿಕವಾಗಿ ಕೆಲಸ ಮಾಡುವ ಮೂಲಕ ಉತ್ತಮ ಸಾಧನೆ ಮಾಡುವ ಮಹತ್ವವನ್ನು ವಿವರಿಸಿದರು. ತಮ್ಮ ಈ ಆತ್ಮೀಯ ಒಡನಾಟದ ಸಂತಸವನ್ನು ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *