ಬೆಳಗಾವಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ

ಬೆಳಗಾವಿ: ದೇಶದಲ್ಲಿ ಬಿಜೆಪಿ ಅಲೆ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಮಾಳವಿಕಾ ಅವಿನಾಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಶೋಕ ನಗರ ಬಡಾವಣೆಯಲ್ಲಿ ಭಾನುವಾರ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಸುರೇಶ ಅಂಗಡಿ ಪರ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು ಕೇಂದ್ರ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನೇ ಮತದಾರರ ಮುಂದಿಟ್ಟು ಮತಯಾಚಿಸುತ್ತಿದ್ದೇವೆ. 5 ವರ್ಷಗಳ ಹಿಂದೆ ದೇಶದ ಜನತೆಗೆ ಮೋದಿ ಯಾರೆಂದು ಗೊತ್ತಿರಲಿಲ್ಲ. ಈಗ ಇಡೀ ವಿಶ್ವವೇ ಮೋದಿ ಸಾಧನೆಯನ್ನು ಕೊಂಡಾಡುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಬಾರಿಸಿರುವ ಸುರೇಶ ಅಂಗಡಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗಾಗಿ ಅವರು ಸತತ 4ನೇ ಬಾರಿಗೆ ಗೆಲ್ಲುವುದು ನಿಶ್ಚಿತ ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ಅಭಿವೃದ್ಧಿಯೇ ನಮ್ಮ ಅಸ್ತ್ರ. ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಮನವಿ ಮಾಡಿದರು. ಬಳಿಕ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಮತದಾರರ ಮನೆ ಮನೆಗೆ ತೆರಳಿ ಮತಯಾಚಿಸಿದರು. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ಲೀನಾ ಟೋಪಣ್ಣವರ ಇತರರು ಇದ್ದರು. ಪ್ರಚಾರ ಆರಂಭಕ್ಕೂ ಮುನ್ನ ಸುರೇಶ ಅಂಗಡಿ ಅಶೋಕ ನಗರದ ಗಣೇಶ ಮಂದಿರದಲ್ಲಿ ವಿಘ್ನ ವಿನಾಯಕನ ದರ್ಶನ ಪಡೆದುಕೊಂಡರು.

ಕಾಂಗ್ರೆಸ್ ಟೀಕಿಸಿದ ಮಾಳವಿಕಾ !

ಸಾಮಾಜಿಕ ಜಾಲತಾಣದಲ್ಲಿ ಚೌಕಿದಾರ್ ಚೋರ್ ಹೈ ಎನ್ನುವ ಪೋಸ್ಟ್ ಹರಿದಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಳವಿಕಾ ಅವಿನಾಶ್, ಮೋದಿ ಆಡಳಿತದಲ್ಲಿ ಸಣ್ಣ ಕಪ್ಪುಚುಕ್ಕೆಯೂ ಇಲ್ಲ. ಕಾಂಗ್ರೆಸ್‌ಗೆ ಟೀಕೆ ಮಾಡಲು ವಿಷಯ ಇಲ್ಲದ್ದರಿಂದ ಇಂಥ ಪೋಸ್ಟ್ ಹರಿಬಿಡುತ್ತಿದೆ ಎಂದು ಆಪಾದಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಫೇಲ್’ ಆಗಿದ್ದಾರೆ. ಹಾಗಾಗಿ ಪ್ರಿಯಾಂಕಾ ಗಾಂಧಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಗೆಲುವು ಬಿಜೆಪಿಯದ್ದೇ ಎಂದು ತಿಳಿಸಿದರು.