ಘಟಬಂಧನ ವಿರುದ್ಧ ಗುಟುರು

ಹುಬ್ಬಳ್ಳಿ: ‘ಧೈರ್ಯ, ಸಾಹಸ, ಇತಿಹಾಸ ಪರಂಪರೆಗಳಿಗೆ ಹೆಸರುವಾಸಿಯಾದ ಹುಬ್ಬಳ್ಳಿ-ಧಾರವಾಡದ ಪುಣ್ಯ, ಪವಿತ್ರ ಭೂಮಿಗೆ ಬಂದಿದ್ದಕ್ಕೆ ನನಗೆ ರೋಮಾಂಚನವಾಗಿದೆ’ ಎಂದು ಕನ್ನಡದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಮಾತು ಪ್ರಾರಂಭಿಸಿದರು. ಆಗ ಅಲ್ಲಿದ್ದ ಲಕ್ಷಾಂತರ ಜನ ಮೋದಿ.., ಮೋದಿ.. ಘೋಷಣೆಯೊಂದಿಗೆ ಚಪ್ಪಾಳೆಗೈದರು.

ಈ ಭಾಗದ ಪುಣ್ಯಪುರುಷರ ಮತ್ತು ಸಾಧಕರನ್ನು ಸ್ಮರಿಸಿದ ಪ್ರಧಾನಿ, ನೇರವಾಗಿ ಕರ್ನಾಟಕ ಸರ್ಕಾರದ ಇಂದಿನ ರಾಜಕೀಯ ನಾಟಕ ಮತ್ತು ಅಸ್ಥಿರ, ದುರ್ಬಲ ನೇತೃತ್ವದ ಕುರಿತ ಟೀಕೆಗೆ ಮುಡಿಪಾಗಿಟ್ಟರು.

ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಅಸಹಾಯಕ ಸರ್ಕಾರವಾಗಿರುವ ಕರ್ನಾಟಕ ಮಾದರಿಯನ್ನು ಪ್ರತಿಪಕ್ಷಗಳು ಕೇಂದ್ರದಲ್ಲೂ ತರಲು ಪ್ರಯತ್ನಿಸುತ್ತಿವೆ. ಕೇಂದ್ರದಲ್ಲಿ ಅಸಹಾಯಕ ಸರ್ಕಾರ ಬೇಕೋ ಅಥವಾ ಸದೃಢ ಸರ್ಕಾರ ಬೇಕೋ? ವಿಕಾಸವಾದ ಬೇಕೋ ಅಥವಾ ವಂಶವಾದ ಬೇಕೋ? ನಿರ್ಧರಿಸಿ ಎಂದು ಪ್ರಧಾನಿ ಕರೆ ನೀಡಿದರು.

ಪ್ರಧಾನ ಸೇವಕ, ಚೌಕಿದಾರನ ಮೇಲೆ ಜನರಿಗೆ ನಂಬಿಕೆ ಇದೆ. ವಿಶ್ವದಾದ್ಯಂತ ಭರವಸೆ ಇದೆ. ಆದರೆ, ಈ ದೇಶದ ಪ್ರತಿಪಕ್ಷದವರಿಗೆ ಇಲ್ಲ. ಏಕೆಂದರೆ ನಾವು ಅಪ್ರಾಮಾಣಿಕರನ್ನು ಮತ್ತು ವಂಶವಾಹಿಗಳನ್ನು ರಕ್ಷಿಸುವುದಿಲ್ಲ. ಹಾಗಾಗಿ ಅವರಿಗೆ ಮೋದಿ ಭಯ ಎಂದು ಮಹಾಘಟಬಂಧನವನ್ನು ಪರೋಕ್ಷವಾಗಿ ಕೇಂದ್ರೀಕರಿಸಿ ಟೀಕಿಸಿದರು. ಪ್ರಾಮಾಣಿಕರಿಗೆ ನಾನು ಇಷ್ಟವಾಗುತ್ತೇನೆ. ಭ್ರಷ್ಟರಿಗೆ ಕಷ್ಟವಾಗುತ್ತೇನೆ. ದೇಶದ ಭದ್ರತೆ, ಅಭಿವೃದ್ಧಿಯನ್ನು ಅಡವಿಟ್ಟು ದಲ್ಲಾಳಿ ಮಾಡಿದವರಿಗೆ ಈಗ ಕಷ್ಟಕಾಲ ಬಂದಿದೆ. ಯುಪಿಎ ಸರ್ಕಾರದಲ್ಲಿ ಬೇನಾಮಿ ಹೆಸರಿನಲ್ಲಿ ದುಡ್ಡು ಮಾಡಿದವರನ್ನು ಮುಟ್ಟಲೂ ಆಗುತ್ತಿರಲಿಲ್ಲ. ಈಗ ಅಂಥವರು ಕಟಕಟೆಯಲ್ಲಿ ನಿಲ್ಲಬೇಕಾಗಿದೆ. ಇದೇ ನಿಜವಾದ ಬದಲಾವಣೆ. ಒಬ್ಬೊಬ್ಬರಾಗಿ ಎಲ್ಲ ದಲ್ಲಾಳಿಗಳು ಕಾನೂನಿನ ಮುಂದೆ ಬರಲೇಬೇಕಾಗಿದೆ ಎಂದು ಪರೋಕ್ಷವಾಗಿ ರಾಬರ್ಟ್ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದರು. ನೇರವಾಗಿ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಮೇಲೆಯೇ ಪ್ರಹಾರ ಆರಂಭಿಸಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಸಹಾಯಕತೆ, ಅಳುಮುಂಜಿತನದ ಬಗ್ಗೆ ವ್ಯಂಗ್ಯವಾಡಿದರು.

ಕೇಂದ್ರ ಸಚಿವರಾದ ಅನಂತಕುಮಾರ ಹೆಗಡೆ, ಡಿ.ವಿ. ಸದಾನಂದಗೌಡ, ರಮೇಶ ಜಿಗಜಿಣಗಿ, ಸಂಸದರಾದ ಪ್ರಹ್ಲಾದ ಜೋಶಿ, ಶಿವಕುಮಾರ ಉದಾಸಿ, ಸುರೇಶ ಅಂಗಡಿ, ಪಿ.ಸಿ ಗದ್ದೀಗೌಡರ್, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತಿತರರಿದ್ದರು.

50 ತಿಂಗಳಲ್ಲಿ ಸಾಧನೆ

ಯುವಕರಿಗೆ ಉದ್ಯೋಗ, ವೃದ್ಧರಿಗೆ ಔಷಧ, ವಿದ್ಯಾರ್ಥಿಗಳಿಗೆ ಶಿಕ್ಷಣ, ರೈತರಿಗೆ ನೀರು ಒದಗಿಸುವತ್ತ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್​ನವರು ಕಳೆದ 40-50 ವರ್ಷಗಳಲ್ಲಿ ಮಾಡದ ಕೆಲಸಗಳನ್ನು ನಾವು ಕೇವಲ 50 ತಿಂಗಳಲ್ಲಿ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರದ ನಾಲ್ಕೂವರೆ ವರ್ಷದ ಸಾಧನೆಗಳ ಬಗ್ಗೆ ಮೋದಿ ವಿವರಿಸಿದರು. ಹಿಂದಿನ ಯುಪಿಎ ಸರ್ಕಾರ 10 ವರ್ಷಗಳಲ್ಲಿ 13 ಲಕ್ಷ ಮನೆಗಳ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, 8 ಲಕ್ಷ ಮನೆಗಳನ್ನೂ ನಿರ್ವಿುಸಿಲ್ಲ. ಎನ್​ಡಿಎ ಸರ್ಕಾರ ಈವರೆಗೆ 15 ಲಕ್ಷ ಮನೆಗಳನ್ನು ನಿರ್ವಿುಸಿದೆ. ಶೀಘ್ರದಲ್ಲಿಯೇ 35 ಲಕ್ಷ ಮನೆಗಳು ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು.

ಯೋಜನೆಗಳಿಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹುಬ್ಬಳ್ಳಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಧಾರವಾಡ ಐಐಟಿ ಶಾಶ್ವತ ಕ್ಯಾಂಪಸ್, ಐಐಐಟಿ ಕಾಯಂ ಕ್ಯಾಂಪಸ್​ಗೆ ಶಂಕುಸ್ಥಾಪನೆ, ಧಾರವಾಡ ನಗರ ಅನಿಲ ಪೂರೈಕೆ ಯೋಜನೆ, ಮಂಗಳೂರು – ಪಾದೂರ ತುರ್ತು ಅವಶ್ಯಕತೆ ಪೆಟ್ರೋಲಿಯಂ ಸಂಗ್ರಹ ಸೌಲಭ್ಯ, ಚಿಕ್ಕಜಾಜೂರ- ಮಾಯಕೊಂಡ ವಿಭಾಗದ ರೈಲ್ವೆ ಜೋಡಿ ಮಾರ್ಗ ಪರಿವರ್ತನೆ, ಧಾರವಾಡ ಪಿಎಂಎವೈ ಅಡಿ 2,350 ಮನೆ ಗಳ ಗೃಹಪ್ರವೇಶ ಯೋಜನೆ ಲೋಕಾರ್ಪಣೆ ಮಾಡಿದರು.

ಭಾಷಾಂತರ ಬೇಡವೆಂದರು

ಪ್ರಧಾನಿ ಮೋದಿ ಅವರು ಹಿಂದಿಯಲ್ಲಿ ಭಾಷಣ ಪ್ರಾರಂಭಿಸುತ್ತಿದ್ದಂತೆ ಕನ್ನಡಕ್ಕೆ ಭಾಷಾಂತರದ ಅಗತ್ಯವಿಲ್ಲ ಎಂಬ ಸಾರ್ವಜನಿಕರ ಕೂಗಿಗೆ ಸ್ಪಂದಿಸಿ ಹಿಂದಿಯಲ್ಲಿಯೇ ಮಾತು ಮುಂದುವರಿಸಿದರು. ಗದುಗಿನ ವೀರನಾರಾಯಣನನ್ನು ಸ್ಮರಿಸಿ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಿ, ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರಿಗೆ ನಮನ ಸಲ್ಲಿಸಿದರು. ಸ್ವಾತಂತ್ರ್ಯಕ್ಕೆ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಕ್ತ ಕನಕದಾಸ, ಕವಿ ಕುಮಾರವ್ಯಾಸ, ಸಾಹಿತಿ ದ.ರಾ. ಬೇಂದ್ರೆ, ಸಂಗೀತಗಾರರಾದ ಡಾ. ಗಂಗೂಬಾಯಿ ಹಾನಗಲ್, ಪಂ. ಭೀಮಸೇನ್ ಜೋಷಿ ಅವರನ್ನೂ ಸ್ಮರಿಸಿದರು. ಮೋದಿ ವೇದಿಕೆ ಏರುತ್ತಲೇ ಸೇರಿದ್ದ ಅಸಂಖ್ಯ ಅಭಿಮಾನಿಗಳು ಮೊಬೈಲ್​ನ ಲೈಟ್ ಬೆಳಗಿಸುವ ಮೂಲಕ ಸ್ವಾಗತ ಕೋರಿದರು.

ಹುಬ್ಬಳ್ಳಿಗೆ ಸಲಾಂ

ಹುಬ್ಬಳ್ಳಿ-ಧಾರವಾಡ ರಾಷ್ಟ್ರಧ್ವಜ ನಿರ್ವಣಗೊಳ್ಳುತ್ತಿರುವ ಕರ್ಮಭೂಮಿ. ಈ ಪವಿತ್ರ ಭೂಮಿಗೆ ನಮಸ್ಕರಿಸುತ್ತೇನೆ. ಬಿಜೆಪಿ ಸದೃಢಗೊಳ್ಳಲು ಹಿರಿಯರಾದ ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ, ಕಿಶನ್​ರಾವ್ ಗೋಖಲೆ, ಎಂ.ಜಿ. ಜರ್ತಾರ್ಘರ್ ಕೊಡುಗೆ ಅಪಾರವಾದದ್ದು ಎಂದು ಮೋದಿ ಸ್ಮರಿಸಿದರು. ಧಾರವಾಡ ಲೋಕಸಭಾ ಕ್ಷೇತ್ರದ 5 ವರ್ಷದ ಸಾಧನೆಗಳ ಕೃತಿಯನ್ನು ಸಂಸದ ಪ್ರಹ್ಲಾದ ಜೋಶಿ ನೀಡುತ್ತಿದ್ದಂತೆಯೇ, ಅವರ ಬೆನ್ನು ತಟ್ಟಿದ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪೇಢೆಯಂತೆ ಸಿಹಿ ಆಗಲಿ

ವರ್ತಮಾನದ ಜತೆಗೆ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ಮನೆಮನೆಗೆ ಗ್ಯಾಸ್ ಸಂಪರ್ಕ ಕೊಡುತ್ತಿದ್ದೇವೆ. ಹುಬ್ಬಳ್ಳಿ-ಧಾರವಾಡವನ್ನು ಶಿಕ್ಷಣ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಮಾಡುತ್ತಿದ್ದೇವೆ. ಧಾರವಾಡ ಸಿಹಿಯಾದ ಪೇಢೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಜನರ ಜೀವನವೂ ಪೇಢೆಯಂತೆ ಸಿಹಿಯಾಗಲಿ ಎಂದು ಮೋದಿ ಹಾರೈಸಿದರು.

ದಿ. ಅನಂತಕುಮಾರ್ ಸ್ಮರಣೆ

ಹುಬ್ಬಳ್ಳಿಯವರೇ ಆದ ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ್ ಅವರನ್ನು ಸ್ಮರಿಸಿದ ಮೋದಿ, ಹುಬ್ಬಳ್ಳಿ ಮತ್ತು ಕರ್ನಾಟಕದ ಅಭಿವೃದ್ಧಿ ಬಗ್ಗೆ ಸದಾ ಚಿಂತಿಸುತ್ತಿದ್ದರು. ಅವರ ಕಾರ್ಯವೈಖರಿಯಿಂದ ಸದಾ ನನ್ನ ಹೃದಯದಲ್ಲಿರುತ್ತಾರೆ. ಇಂತಹ ಹಲವು ಮಹಾನ್ ವ್ಯಕ್ತಿಗಳ ಗುರಿ ಅಭಿವೃದ್ಧಿಯೇ ಆಗಿದ್ದು, ಅದನ್ನು ತಲುಪುವ ಕಾರ್ಯವನ್ನು ಎನ್​ಡಿಎ ಸರ್ಕಾರ ಮಾಡುತ್ತದೆ ಎಂದರು.

ಪ್ರಧಾನಿ ಸ್ವಾಗತಿಸಿದ ದೇಶಪಾಂಡೆ

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಜೆ 6.30ಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸ್ವಾಗತಿಸಿದರು. ಮೇಯರ್ ಸುಧೀರ ಸರಾಫ್ ಹಾಗೂ ಉಪ ಮೇಯರ್ ಮೇನಕಾ ಹುರಳಿ ಪ್ರಧಾನಿಗೆ ಪುಸ್ತಕ ನೀಡಿದರು. ಮಾಜಿ ಮೇಯರ್ ಅಶ್ವಿನಿ ಮಜ್ಜಗಿ ಪುಸ್ತಕವೊಂದರಲ್ಲಿ ಪ್ರಧಾನಿ ಹಸ್ತಾಕ್ಷರ ಪಡೆದುಕೊಂಡರು.

ಇಂದು ವಸಂತ ಪಂಚಮಿ, ಅಂದರೆ ವಾತಾವರಣ ಬದಲಾಗುವ ಸಮಯ. ಈ ಸಮಾವೇಶಕ್ಕೆ ನೀವು ಬಂದ ಸಂಖ್ಯೆಯನ್ನು ನೋಡಿದರೆ ರಾಜ್ಯದ ರಾಜಕೀಯ ವಾತಾವರಣವೂ ಬದಲಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ.

| ನರೇಂದ್ರ ಮೋದಿ, ಪ್ರಧಾನಿ

ಅಭಿವೃದ್ಧಿಗೆ ರಾಜ್ಯಸರ್ಕಾರ ಸ್ವಾಗತ

ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಧಾನಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದನ್ನು ಸಚಿವ ಆರ್.ವಿ. ದೇಶಪಾಂಡೆ ಸ್ವಾಗತಿಸಿದ್ದಾರೆ. ದೇಶದಲ್ಲಿಯೇ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಸರ್ಕಾರ ವಸತಿ, ಶಿಕ್ಷಣ ಸೇರಿ ಮೂಲ ಸೌಕರ್ಯ ಗಳನ್ನು ಜನತೆಗೆ ಒದಗಿಸುವಲ್ಲಿ ಆದ್ಯತೆ ನೀಡಿದೆ. ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಕೆಲಗೇರಿ ಗ್ರಾಮದ ಚಿಕ್ಕಮಲ್ಲಿಗವಾಡದಲ್ಲಿ 470.21 ಎಕರೆ ಹಾಗೂ ಐಐಐಟಿ ಸ್ಥಾಪನೆಗೆ ತಡಸಿನಕೊಪ್ಪ ಗ್ರಾಮದಲ್ಲಿ 60 ಎಕರೆ ಜಾಗವನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡಿದೆ. ಈ ಎರಡೂ ಸಂಸ್ಥೆಗಳ ಸ್ಥಾಪನೆಯಿಂದ ರಾಜ್ಯಕ್ಕೆ ಉನ್ನತ ಜ್ಞಾನ, ತಂತ್ರಜ್ಞಾನ, ಹೊಸ ಸಂಶೋಧನೆಗಳು ಮತ್ತು ಯುವಜನರ ಉದ್ಯೋಗ ಅರ್ಹತೆ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬೆದರಿಕೆ ಪತ್ರ’ ತನಿಖೆ ಚುರುಕು

ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಭೇಟಿ ನೀಡಿದಾಗ ಹತ್ಯೆ ಮಾಡುವುದಾಗಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬಂದಿದ್ದ ಅನಾಮಧೇಯ ಪತ್ರದ ಬಗ್ಗೆ ತನಿಖೆ ಚುರುಕುಗೊಂಡಿದೆ. ಪತ್ರ ಹಾವೇರಿಯಿಂದ ಬಂದಿದ್ದರಿಂದ ಅಲ್ಲಿಗೆ ಧಾರವಾಡ ಪೊಲೀಸರು ಭಾನುವಾರ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಅಲ್ಲದೆ, ಹುಬ್ಬಳ್ಳಿಗೆ ಪ್ರಧಾನಿ ಆಗಮನ ವಿರೋಧಿಸಿ ಕಾಂಗ್ರೆಸ್ ಸೇರಿ ಹಲವು ಸಂಘಟನೆಗಳು ಭಾನುವಾರ ಪ್ರತಿಭಟನೆ ನಡೆಸಿ, ಗೋ ಬ್ಯಾಕ್ ಮೋದಿ ಎಂದು ಘೋಷಣೆ ಕೂಗಿದ್ದು, 40ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ರಾಜ್ಯವ್ಯಾಪಿ ಬಿಜೆಪಿ ಧ್ವಜ ಹಾರಾಟ ನಾಳೆ

ಕಲಬುರಗಿ: ರಾಜ್ಯವ್ಯಾಪಿ ಪಕ್ಷದ ಎಲ್ಲ ಕಾರ್ಯಕರ್ತರ ಮನೆ ಮೇಲೆ ಮಂಗಳವಾರ ಬೆಳಗ್ಗೆ 9ಕ್ಕೆ ಬಿಜೆಪಿ ಧ್ವಜ ಹಾರಿಸಿ ‘ಮೋದಿ ಮತ್ತೊಮ್ಮೆ ಅಧಿಕಾರಕ್ಕೆ’ ಸಂಕಲ್ಪ ಮಾಡಲಾಗುತ್ತಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಹೇಳಿದರು. ದೇಶದ ಅಭಿವೃದ್ಧಿ, ರಾಷ್ಟ್ರ ರಕ್ಷಣೆಗೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಅನಿವಾರ್ಯ. ಸೋಮವಾರ ದೇಶವ್ಯಾಪಿ ಸಮರ್ಪಣ ದಿನ ಆಚರಿಸಲಾಗುತ್ತಿದ್ದು, 5ರಿಂದ 1000 ರೂ.ವರೆಗೆ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಮೋದಿ ಆಪ್, ಆನ್​ಲೈನ್, ಚೆಕ್ ಮೂಲಕ ದೇಣಿಗೆ ಸಂಗ್ರಹಿಸುವ ಅಭಿಯಾನ ಆಯೋಜಿಸಲಾಗಿದೆ. ಮಂಗಳವಾರ ಮೋದಿ ಅವರು ಅಹಮದಾಬಾದ್​ನಲ್ಲಿ ಧ್ವಜ ಹಾರಿಸಿ ಸಂಕಲ್ಪ ಮಾಡಲಿದ್ದಾರೆ ಎಂದರು.

14ರಂದು ಅಮಿತ್ ಷಾ ರಾಜ್ಯ ಪ್ರವಾಸ

ಬೆಂಗಳೂರು: ಪ್ರಧಾನಿ ಮೋದಿ ರ್ಯಾಲಿಯ ಬೆನ್ನ ಹಿಂದೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಪ್ರವಾಸ ನಿಗದಿಯಾಗಿದೆ. ಫೆ.14ರಂದು ಚಿಕ್ಕಬಳ್ಳಾಪುರದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಷಾ ನಡೆಸಲಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೋಲಾರ ಸಂಸತ್ ಕ್ಷೇತ್ರಗಳ ಪ್ರತಿ ಬೂತ್ ಮಟ್ಟದ ಕನಿಷ್ಠ 10 ಕಾರ್ಯಕರ್ತರನ್ನು ಸೇರಿಸಲು ನಿರ್ಧರಿಸಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಹೇಗೆ ಮತದಾರರನ್ನು ಸೆಳೆಯಬೇಕು ಎಂಬ ಬಗ್ಗೆ ಷಾ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೋದಿ ಇದೇ ತಿಂಗಳಲ್ಲಿ ಇನ್ನೆರಡು ರ್ಯಾಲಿ, ಮಾರ್ಚ್​ನಲ್ಲಿ ಮತ್ತೆರಡು ರ್ಯಾಲಿಗಳಿಗೆ ಸಮಯ ನೀಡಿದ್ದಾರೆ.