ಮೋದಿ, ಕೆಸಿಆರ್​ ಇಬ್ಬರೂ ಜುಮ್ಲಾ ಬ್ರದರ್ಸ್‌: ಕಪಿಲ್​ ಸಿಬಲ್​

ಹೈದರಾಬಾದ್: ​ಬಿಜೆಪಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ನಡುವೆ ಪೊಲಿಟಿಕಲ್​ ಮ್ಯಾಚ್​ ಫಿಕ್ಸಿಂಗ್​ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ತೆಲಂಗಾಣದ ಹಂಗಾಮಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್​ ಅವಳಿ ಜವಳಿಯ ಮತ್ತು ಸುಳ್ಳಿನ ಸೋದರರಿದ್ದಂತೆ ಎಂದು ಹಿರಿಯ ಕಾಂಗ್ರೆಸ್​ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಕಪಿಲ್​ ಸಿಬಲ್​ ತಿಳಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮತ್ತು ಟಿಆರ್​ಎಸ್ ವೇದಿಕೆ ಮೇಲೆ ಪರಸ್ಪರ ಟೀಕಿಸಿಕೊಳ್ಳುತ್ತಾರೆ. ಆದರೆ ಹಿಂದೆ ಒಬ್ಬರಿಗೊಬ್ಬರು ಪರಸ್ಪರ ಬೆಂಬಲ ಸೂಚಿಸುತ್ತಾರೆ. ಕ್ರಿಕೆಟ್​ನಲ್ಲಾಗುವ ಮ್ಯಾಚ್​ ಫಿಕ್ಸಿಂಗ್​ನಂತೆ ಅವರಿಬ್ಬರ ನಡುವೆ ರಾಜಕೀಯದಲ್ಲಿ ಮ್ಯಾಚ್​ ಫಿಕ್ಸಿಂಗ್​ ಆಗಿದೆ. ಇದು ರಾಜ್ಯದ ಜನತೆಯ ಗಮನಕ್ಕೂ ಬಂದಿದೆ ಎಂದರು.

ಕೆಸಿಆರ್ ಯಾವಾಗಲೂ ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆ. ನರೇಂದ್ರ ಮೋದಿ ಮತ್ತು ಕೆಸಿಆರ್ ಅವಳಿ ಜವಳಿಯಿದ್ದಂತೆ. ಇಬ್ಬರೂ ಸುಳ್ಳಿನ ಸೋದರರು (ಜುಮ್ಲಾ ಬ್ರದರ್ಸ್​) ಕೆಸಿಆರ್​ ಇದುವರೆಗೂ ರಫೇಲ್​ ಡೀಲ್​ ಅಥವಾ ತೈಲ ಬೆಲೆ ಹೆಚ್ಚಳದ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಅವರಿಗೆ ಬಿಜೆಪಿಯನ್ನು ಅಸಮಧಾನಗೊಳಿಸಲು ಇಷ್ಟವಿಲ್ಲ ಎಂದು ಆರೋಪಿಸಿದರು.

ಕೆಸಿಆರ್​ ನೇತೃತ್ವದ ಟಿಆರ್​ಎಸ್​ ಸರ್ಕಾರ ಇದುವರೆಗೂ ರಾಜ್ಯದ ಅಭಿವೃದ್ಧಿಗೆ ಏನೂ ಮಾಡಿಲ್ಲ. ಇದೇ ಕಾರಣಕ್ಕಾಗಿ ತೆಲಂಗಾಣ ಬಡ ರಾಜ್ಯವಾಗಿಯೇ ಉಳಿದಿದ್ದು, ಸಾಲದ ಹೊರೆ ಹೊತ್ತುಕೊಂಡಿದೆ. ಸಾವಿರಾರು ಶಾಲೆಗಳು ಬಾಗಿಲು ಮುಚ್ಚಿಕೊಂಡು ಹೋಗಿವೆ. ತೆಲಂಗಾಣದಲ್ಲಿ ಯಾವ ಅಭಿವೃದ್ಧಿಯಾಗಿದೆ ಎಂದು ಪ್ರಶ್ನಿಸಿದರು.

ಡಿಸೆಂಬರ್​ 7ರಂದು ತೆಲಂಗಾಣ ವಿಧಾನಸಭೆ ನಡೆಯಲಿದ್ದು , ಡಿ.11ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. (ಏಜೆನ್ಸೀಸ್)