ಅಭಿನಂದನ್​ ಬಿಡುಗಡೆ ಮಾಡಿದರೂ ಪಾಕ್​ಗೆ ತಪ್ಪಲ್ಲ ಪ್ರಧಾನಿ ಮೋದಿ ಅವರ ಭೀತಿ

ಇಸ್ಲಾಮಾಬಾದ್​: ತನ್ನ ಹಿಡಿತದಲ್ಲಿರುವ ಭಾರತೀಯ ವಾಯುಪಡೆ ವಿಂಗ್​ ಕಮಾಂಡರ್​ ಅಭಿನಂದನ್​ ಅವರನ್ನು ಬಿಡುಗಡೆ ಮಾಡಿದ ಬಳಿಕವೂ ಭಾರತ ಮತ್ತೊಮ್ಮೆ ದಂಡೆತ್ತಿ ಬರುವ ಭಯ ಪಾಕಿಸ್ತಾನವನ್ನು ಕಾಡುತ್ತಿದೆ. ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರಿಗಿಂತ ಭಿನ್ನವಾಗಿ ಪ್ರಧಾನಿ ನರೇಂದ್ರ ಮೋದಿ ಆಲೋಚಿಸುವುದೇ ಇದಕ್ಕೆ ಕಾರಣ ಎಂಬ ಮಾತು ಪಾಕಿಸ್ತಾನದಲ್ಲಿ ಕೇಳಿ ಬಂದಿದೆ.

ಅಭಿನಂದನ್​ ವಿಷಯವಾಗಿ ಪಾಕಿಸ್ತಾನದ ಸಂಸತ್​ನಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪಾಕ್​ ಸಚಿವ ಶೇಖ್​ ರಶೀದ್​​ ಅಹ್ಮದ್​, ಭಾರತದ ಪೈಲಟ್​ ಅಭಿನಂದನ್​ ವರ್ಧಮಾನ್​ ಅವರನ್ನು ಬಿಡುಗಡೆ ಮಾಡಿದ ಬಳಿಕವೂ ಭಾರತ ನಮ್ಮ ಮೇಲೆ ದಂಡೆತ್ತಿ ಬರುವುದಿಲ್ಲ ಎಂಬುದನ್ನು ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅಟಲ್​ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿಯಾಗಿದ್ದಾಗ ಪರಿಸ್ಥಿತಿ ಭಿನ್ನವಾಗಿತ್ತು. ಆದರೆ, ಈಗ ಅಲ್ಲಿ ಎಲ್ಲವೂ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಭಿನ್ನವಾಗಿ ಆಲೋಚಿಸುವ ನಾಯಕರಾಗಿದ್ದಾರೆ. ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ದಾಳಿಗಳನ್ನು ಮೋದಿ ಸಂಘಟಿಸಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಹಾಗಾಗಿ ಭಾರತೀಯ ವಾಯುಪಡೆ ಪೈಲಟ್​ ಅನ್ನು ಬಿಡುಗಡೆ ಮಾಡಿದ ಬಳಿಕ ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ಏನು ಮಾಡುವುದು? ಅಲ್ಲಿ ಮೋದಿ ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅವರು ನಾಳೆ ದಾಳಿ ಮಾಡಿದರೆ ಏನು ಮಾಡುವುದು? ಭಾರತದಲ್ಲಿರುವ ಎಲ್ಲ ಮುಸ್ಲಿಮರು ಸಹಾಯಕ್ಕಾಗಿ ಪಾಕಿಸ್ತಾನದತ್ತಲೇ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)