ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ

ಕೊಳ್ಳೇಗಾಲ: ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇಶಕಂಡ ಧೀಮಂತ ನಾಯಕರಲ್ಲಿ ನರೇಂದ್ರ ಮೋದಿಯೂ ಒಬ್ಬರಾಗಿದ್ದು, ಅವರ ಆಲೋಚನೆಯನ್ನು ಮತದಾರರು ಶ್ಲಾಘಿಸಬೇಕು ಎಂದರು.

ಹಲವು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಇದೀಗ ಹೀನಾಯ ಹಂತಕ್ಕೆ ತಲುಪಿದ್ದು, ಬಲಹೀನವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಾಗಿರುವ ಕಾಂಗ್ರೆಸ್ ಪಕ್ಷ ಹೇಳಲು ಹೆಸರಿಲ್ಲದಂತೆ ಲೋಕಸಭಾ ಚುನಾವಣೆಯಲ್ಲಿ ತಳ ಕಾಣಲಿದೆ. ಜನರಿಗೆ ಕಾಂಗ್ರೆಸ್ ಬಗ್ಗೆ ತಿಳಿದಿದ್ದು, ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆ ಪಕ್ಷದಲ್ಲಿ ಅವರ ಸ್ಥಿತಿ ಹೀಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮುಂದಿನ ದಿನದಲ್ಲಿ ಸಿದ್ದರಾಮಯ್ಯರಿಂದಲೇ ಪಕ್ಷ ತಳಹದಿ ತಲುಪುವುದರಲ್ಲಿ ಆಶ್ಚರ್ಯವಿಲ್ಲ. ಅಲ್ಲದೇ, ಶೀಘ್ರ ಮತ್ತೊಂದು ಸಾರ್ವಜನಿಕ ಸಭೆಯಲ್ಲಿ ಮತ್ತಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ ಎಂದರು.

ಲೋಕಸಭೆಗೆ ತಾವು ಮೊದಲ ಬಾರಿ ಸ್ಪರ್ಧಿಸಿದಾಗ ಕೊಳ್ಳೇಗಾಲ ಮತ್ತು ಸಂತೆಮರಹಳ್ಳಿ ಕ್ಷೇತ್ರದಲ್ಲಿ ಹೆಚ್ಚಿನ ಮತಗಳು ಬಂದಿದ್ದವು. ಸಕ್ರಿಯ ರಾಜಕಾರಣದಿಂದ ದೂರ ಉಳಿಯಬೇಕು ಎಂದುಕೊಂಡಿದ್ದ ತಾನು, ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು. ಕೊಳ್ಳೇಗಾಲ ಭಾಗದ ಜನತೆ ತನ್ನನ್ನು ಈ ಬಾರಿ ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ, ಮುಖಂಡರಾದ ಸರ್ವೇಶ್ ಬಸವಯ್ಯ, ಡಾ.ಎಸ್.ದತ್ತೇಶ್ ಕುಮಾರ್, ಚಂದ್ರಕಲಾಬಾಯಿ, ಮಾಂಬಳ್ಳಿ ನಂಜುಂಡಸ್ವಾಮಿ ಇತರರು ಹಾಜರಿದ್ದರು.