ಮೋದಿ ಪ್ರಚಾರದ ವೇಳೆ ಎಲ್ಲೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ರಾಯಚೂರು: ಬಿಜೆಪಿಯವರು ಪ್ರಚಾರದ ವೇಳೆ ನಮ್ಮನ್ನು ನೋಡಿ ಮತ ಕೊಡಬೇಡಿ, ಮೋದಿಯನ್ನ ನೋಡಿ ವೋಟು ಕೊಡಿ ಎಂದು ಕೇಳುತ್ತಾರೆ. ಹಿಂದೆ ಗೆದ್ದ 17 ಸಂಸದರು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.

ರಾಯಚೂರಿನಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ 5 ವರ್ಷಗಳ ಅವಧಿ ಮುಗಿದ ನಂತರ 5 ವರ್ಷಗಳ ಸಾಧನೆ ಅಭಿವೃದ್ಧಿ ಕೆಲಸ ಜನರ ಮುಂದಿಡಬೇಕಾದದ್ದು ಅವರ ಕರ್ತವ್ಯ. ಆದರೆ, ಪ್ರಚಾರಕ್ಕೆ ಬಂದ ಪ್ರಧಾನಿ ಎಲ್ಲೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಜಿಕಲ್ ಸ್ಟ್ರೈಕ್ ನಿಮ್ಮ ಅವಧಿಯಲ್ಲಿ ಮಾತ್ರ ನಡೆದಿಲ್ಲ. ಹಿಂದೆ ಪಾಕಿಸ್ತಾನದ ಮೇಲೆ ದಾಳಿ ಮಾಡಿದಾಗ ಮೋದಿ ಹುಟ್ಟಿಯೇ ಇರಲಿಲ್ಲ ಎಂದ ಸಿದ್ದರಾಮಯ್ಯ ಇಂದಿರಾಗಾಂಧಿ ಅವರನ್ನು ವಾಜಪೇಯಿ ಅವರು ಸದನದಲ್ಲಿ ದುರ್ಗೆ ಎಂದು ಹೊಗಳಿದ್ದರು. 5 ವರ್ಷಗಳಲ್ಲಿ ಯಾವುದೇ ಸಾಧನೆ ಮಾಡದ ಮೋದಿ, ಭಾವನಾತ್ಮಕ ವಿಚಾರ ಮಾತನಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಸಂವಿಧಾನ ಉಳಿಯಬೇಕಾದರೆ ಮೋದಿ ಅವರನ್ನು ಸೋಲಿಸಬೇಕು ಎಂದ ಅವರು, ರೈತರ ಸಾಲಮನ್ನಾ ಮಾಡಿ ಎಂದರೆ ನೋಟು ಪ್ರಿಂಟ್​ ಮಾಡುವ ಮಿಷಿನ್ ಇಲ್ಲ ಅಂತ ಹೇಳ್ತಾರೆ. ಮನಿ ಕಿ ಬಾತ್ ನಿಂದ ಜನರ ಹೊಟ್ಟೆ ತುಂಬಲ್ಲ, ಹಿಂದೆ ನಮ್ಮ ಸರಕಾರ ೪ ಕೋಟಿ ಜನರಿಗೆ ಅಕ್ಕಿ ಕೊಟ್ಟಿದೆ. ಬಡವರು, ದಲಿತರು, ಹಿಂದುಳಿದವರ ಬಗ್ಗೆ ಮೋದಿ ಅವರಿಗೆ ಕನಿಕರ ಇಲ್ಲ. ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಲು ಕಾಂಗ್ರೆಸ್ ಗೆಲ್ಲಿಸಿ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತೆ ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ ಎಂದರು.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *