ಮೋದಿ ಆಡಳಿತದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ

ಬೆಳಗಾವಿ: ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿದ್ದು, ಅಭಿವೃದ್ಧಿಗೆ ಅಡ್ಡಿಯಾಗಿದ್ದ 1,200 ಹಳೆ ಕಾನೂನುಗಳನ್ನು ರದ್ದುಪಡಿಸಲಾಗಿದೆ ಎಂದು ಬಿಜೆಪಿ ರಾಜ್ಯವಕ್ತಾರ, ನ್ಯಾಯವಾದಿ ಎಂ.ಬಿ.ಝಿರಲಿ ಹೇಳಿದ್ದಾರೆ.

ಶುಕ್ರವಾರ ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, 65 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಮಾಡದ ಅಭಿವೃದ್ಧಿಯನ್ನು 5 ವರ್ಷದಲ್ಲಿ ಮೋದಿ ಮಾಡಿದ್ದಾರೆ. ದೇಶದಲ್ಲಿ ದೀರ್ಘಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ತನ್ನ 65 ವರ್ಷ ಆಡಳಿತಾವಧಿಯಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ 1,300 ಕಾನೂನುಗಳನ್ನು ರದ್ದು ಮಾಡಿತ್ತು. ಆದರೆ, ಪ್ರಧಾನಿ ಮೋದಿ ಸರ್ಕಾರ ಐದು ವರ್ಷದ ಆಡಳಿತಾವಧಿಯಲ್ಲಿ ನಿಷ್ಕ್ರೀಯವಾಗಿದ್ದ, ಅಭಿವೃದ್ಧಿಗೆ ಅಡ್ಡಿಯಾಗಿದ್ದ 1,200 ಅಧಿಕ ಕಾನೂನುಗಳನ್ನು ರದ್ದು ಮಾಡಿದ್ದು, 1,800 ಕಾನೂನುಗಳನ್ನು ರದ್ದು ಮಾಡಲು ಗುರುತಿಸಲಾಗಿದೆ.

ಇದರಿಂದ ನ್ಯಾಯಾಂಗ ವ್ಯವಸ್ಥೆ ವೇಗ ಪಡೆದುಕೊಳ್ಳಲಿದೆ. ಜತೆಗೆ ನ್ಯಾಯಾಂಗ ವ್ಯವಸೈಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಬಿಜೆಪಿ ಸರ್ಕಾರ ಚಾಲನೆ ನೀಡಿದೆ ಎಂದರು. ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾದೇಶ ನಡುವಿನ ಗಡಿ ಸಮಸ್ಯೆಯನ್ನು ಪರಿಹರಿಸಿ ಅಕ್ರಮ ನುಸುಳುಕೋರರನ್ನು ಪ್ರಧಾನಿ ಮೋದಿ ಸರ್ಕಾರ ತಡೆ ಹಿಡಿದಿದೆ. ಅಷ್ಟೇ ಅಲ್ಲದೆ ಮಾವೋವಾದಿಗಳ ಮೇಲೆ ದಾಳಿ ನಡೆಸಿ ಕಠಿಣ ಸಂದೇಶ ನೀಡಿದೆ ಎಂದರು. ಬಸವರಾಜ ರೊಟ್ಟಿ, ಹನುಮಂತ ಕೊಂಗಾರಿ ಇನ್ನಿತರರು ಇದ್ದರು.

ದೇವೇಗೌಡ ಕ್ಷಮೆ ಕೇಳಲಿ

ಲೋಕಸಭೆ ಚುನಾವಣೆ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇಶದ ಭವಿಷ್ಯ ಮುಸ್ಲಿಂ ಸಮುದಾಯದ ಮೇಲೆ ನಿಂತಿದೆ ಎನ್ನುತ್ತಾ ದೇಶ ವಿಭಜನೆ ಮಾಡುವುದು ಮತ್ತು ಹಿಂದುಗಳಿಗೆ ಅವಹೇಳನ ಮಾಡುವ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ದೇವೇಗೌಡರು ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ನ್ಯಾಯವಾದಿ ಎಂ.ಬಿ.ಝಿರಲಿ ಆಗ್ರಹಿಸಿದರು.

ಜಿಲ್ಲೆಯ ವಿವಿಧ ಭಾಗದಲ್ಲಿರುವ ರಾಜಸ್ಥಾನ ಮೂಲದ ರಾಜಸ್ಥಾನಿ ಸಮಾಜದ ಜನರನ್ನು ಭೇಟಿ ಮಾಡಿ ಅವರೊಂದಿಗೆ ಚುನಾವಣೆ ಸಂಬಂಧ ಚರ್ಚಿಸಲು ರಾಜಸ್ಥಾನ ಮಾಜಿ ಸಚಿವ ಕಿರಣ ಮಹೇಶ್ವರ ಅವರು ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
| ರಾಜೇಂದ್ರ ಹರಕುಣಿ, ಬಿಜೆಪಿ ನಗರ ಘಟಕದ ಅಧ್ಯಕ್ಷ