ಮಹಾಮೈತ್ರಿಕೂಟ V/S ನರೇಂದ್ರ ಮೋದಿ

ಕೋಲ್ಕತ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಪಣತೊಟ್ಟಿರುವ ವಿಪಕ್ಷಗಳು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಶನಿವಾರ ಶಕ್ತಿ ಪ್ರದರ್ಶನ ನಡೆಸಿದವು. ಟಿಎಂಸಿ ಆಯೋಜಿಸಿದ್ದ ಬೃಹತ್ ರ್ಯಾಲಿಯಲ್ಲಿ 20ಕ್ಕೂ ಹೆಚ್ಚು ಪಕ್ಷಗಳ ನಾಯಕರು ಭಾಗಿಯಾಗಿ, ಕೇಂದ್ರ ಸರ್ಕಾರ ವಿರುದ್ಧ ರಣಕಹಳೆ ಮೊಳಗಿಸಿದರು.

ಯುನೈಟೆಡ್ ಇಂಡಿಯಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ನಾವೆಲ್ಲ ಒಟ್ಟಾಗಿ ಶ್ರಮಿಸಿ ದೇಶದಲ್ಲಿ ಹೊಸ ಪರ್ವ ಆರಂಭಿಸಲಿದ್ದೇವೆ. ಹವಾಮಾನ ಬದಲಾಗುತ್ತದೆ, ಮೋದಿ ಸರ್ಕಾರ ಏಕೆ ಬದಲಾಗಬಾರದು. ನಮ್ಮ ನಡುವೆ ಯಾರಾದರೂ ಪ್ರಧಾನಿಯಾಗಲಿ. ಆದರೆ ಬಿಜೆಪಿಯನ್ನು ಮಣಿಸಲೇಬೇಕು ಎಂದು ಕರೆ ನೀಡಿದರು.

‘ಮೋದಿ ಸರ್ಕಾರದ ಆಯುಷ್ಯ ಮುಗಿದಿದೆ. ಐದು ವರ್ಷದ ಹಿಂದೆ ಈ ಸರ್ಕಾರದ ಬಳಿ ಇದ್ದ ಹಣ ಮತ್ತು ಈಗ ಇರುವ ಹಣವನ್ನು ನೀವು ನೋಡಿದರೆ ದೇಶದಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತದೆ. ಸಿಬಿಐ ಮೇಲೆ ಜನರಿಗೆ ಇದ್ದ ವಿಶ್ವಾಸವನ್ನು ಸರ್ಕಾರ ಹಾಳುಗೆಡವಿತು. ರಥಯಾತ್ರೆ ಹೆಸರಲ್ಲಿ ಹಿಂಸಾಚಾರಕ್ಕೆ ಅವಕಾಶ ಕೊಡಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಸೋನಿಯಾ ಸಂದೇಶ ಓದಿದ ಖರ್ಗೆ : ದೇಶದ ಸಂವಿಧಾನವನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಶಕ್ತಿಗಳನ್ನು ನಾವು ಸೋಲಿಸಬೇಕಿದೆ. ದುರಹಂಕಾರಿ ಮೋದಿ ಸರ್ಕಾರದ ವಿರುದ್ಧ ನಾಯಕರನ್ನು ಒಟ್ಟುಗೂಡಿಸಲು ಈ ರ‍್ಯಾಲಿ ಮಹತ್ವದ್ದಾಗಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಪರವಾಗಿ ಈ ಸಂದೇಶ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ತ್ಯಾಗಕ್ಕೆ ಮತ್ತೊಂದು ಹೆಸರು ಹಿಂದು, ಧರ್ಮದ ಮೇಲಿನ ನಂಬಿಕೆಗೆ ಮತ್ತೊಂದು ಹೆಸರು ಮುಸಲ್ಮಾನ್, ಪ್ರೀತಿಗೆ ಇನ್ನೊಂದು ಹೆಸರು ಇಸಾಯಿ, ಬಲಿದಾನಕ್ಕೆ ಸಿಖ್ಖರು ಮಾದರಿ. ಇದೇ ನಮ್ಮೆಲ್ಲರ ಪ್ರೀತಿಯ ಹಿಂದುಸ್ಥಾನ.

| ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಸಿಎಂ

ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ದೇಶದ ಇತಿಹಾಸದಲ್ಲಿ 2ನೇ ಸ್ವಾತಂತ್ರ್ಯ ಹೋರಾಟ ಎನಿಸಿಕೊಳ್ಳಲಿದೆ. ಪ್ರಧಾನಿಗೆ ಮಮತಾ ಬ್ಯಾನರ್ಜಿ ಕಂಡರೆ ಭಯ.

| ಎಂ.ಕೆ.ಸ್ಟಾಲಿನ್ ಡಿಎಂಕೆ ಮುಖ್ಯಸ್ಥ

ಜನರೊಂದಿಗೆ ನಿಕಟವಾಗಿ ಬೆರೆಯಲು ಮತ್ತು ರಾಜ್ಯದ ಹಿತಾಸಕ್ತಿ ಕಾಪಾಡಲು ಪ್ರಾದೇಶಿಕ ಪಕ್ಷಗಳಲ್ಲಿ ಪ್ರಬಲ ಇಚ್ಛಾಶಕ್ತಿಯಿದೆ.

| ಎಚ್.ಡಿ. ಕುಮಾರಸ್ವಾಮಿ ಕರ್ನಾಟಕ ಸಿಎಂ

ದೇಶದಲ್ಲಿ ಜಾತ್ಯತೀತ ಸರ್ಕಾರ ಆಡಳಿತಕ್ಕೆ ತರಲು ಐತಿಹಾಸಿಕ ಪ್ರಯತ್ನವಿದು. ಮಮತಾ ಮಹಾನ್ ನಾಯಕಿ. ಭಿನ್ನಾಭಿಪ್ರಾಯಗಳನ್ನು ಮರೆತು ನಾವೆಲ್ಲರೂ ಹೇಗೆ ಒಂದಾಗಬೇಕು ಎಂಬುದರ ಕಡೆಗೆ ಗಮನಹರಿಸಬೇಕು. ಪ್ರಧಾನಿ ಮೋದಿ ಯಾರೆಲ್ಲರ ವಿರುದ್ಧ ಆರೋಪ ಮಾಡಿದ್ದಾರೆಯೋ ಅವರೆಲ್ಲರೂ ಬಿಜೆಪಿ ವಿರುದ್ಧ ಮಹಾಮೈತ್ರಿಕೂಟ ರಚನೆಗೆ ಒಂದಾಗಬೇಕು.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

ಎಷ್ಟೇ ಬೆಲೆ ತೆತ್ತರೂ ಪರವಾಗಿಲ್ಲ, ಮೋದಿ ಮತ್ತು ಷಾ ಅವರನ್ನು ನಾವು ಸೋಲಿಸಬೇಕಿದೆ. ಈ ರ‍್ಯಾಲಿ ದೇಶದ ಇತಿಹಾಸದಲ್ಲಿ ಪ್ರಮುಖವಾಗಲಿದೆ.

| ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ

ಉಳಿವಿಗಾಗಿ ಮಹಾಮೈತ್ರಿ ರಚನೆ

ಸಿಲ್​ವಾಸ (ಗುಜರಾತ್): ಗುಜರಾತ್​ನಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಮಹಾಮೈತ್ರಿಕೂಟ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದಾರೆ.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆ ಸಕಾರಾತ್ಮಕ ಚಿಂತನೆ ಮತ್ತು ನಕಾರಾತ್ಮಕ ವರ್ತನೆ ನಡುವಿನ ಸಮರ. ನಮ್ಮ ಅಭಿವೃದ್ಧಿ ಮತ್ತು ವಿಪಕ್ಷಗಳ ಆಡಳಿತದಲ್ಲಿನ ಭ್ರಷ್ಟಾಚಾರ ನಡುವಿನ ಯುದ್ಧ ಎಂದು ಬಣ್ಣಿಸಿದರು. ಕಾಂಗ್ರೆಸ್ ಆಡಳಿತದ ವಿರುದ್ಧ ಟೀಕೆ ಮಾಡುತ್ತಿದ್ದವರು ಈಗ ಒಂದಾಗುತ್ತಿದ್ದಾರೆ. ಈ ಮಹಾಮೈತ್ರಿ ಬಿಜೆಪಿ ವಿರುದ್ಧ ರಚನೆಯಾಗುತ್ತಿಲ್ಲ. ಬದಲಿಗೆ ದೇಶದ ಜನರ ವಿರುದ್ಧ ರಚನೆಯಾಗುತ್ತಿದೆ. ವೇದಿಕೆಗೆ ಎಲ್ಲರೂ ಬಂದಿಲ್ಲವಾದರೂ, ಒಳಗೊಳಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ಉಳಿವಿಗಾಗಿ ಮಹಾಮೈತ್ರಿ ರಚನೆಯಾಗಿದೆ. ಇದು ಅದ್ಬುತ ದೃಶ್ಯ ಎಂದು ಪ್ರಧಾನಿ ಟೀಕಿಸಿದರು.

ಬಿಜೆಪಿ ಕಂಡರೆ ಟಿಎಂಸಿಗೆ ಹೆದರಿಕೆ: ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಒಬ್ಬ ಶಾಸಕರಿದ್ದಾರೆ. ಆದರೂ ಪಕ್ಷದ ವಿರುದ್ಧ ಸ್ಪರ್ಧಿಸಲು ಎಲ್ಲ ವಿಪಕ್ಷಗಳು ಒಂದಾಗಿ ಜನರಿಗೆ ನೆರವು ನೀಡಲು ಬೇಡುತ್ತಿವೆ. ಇವರೆಲ್ಲರಿಗೂ ಒಬ್ಬ ಶಾಸಕ ನಿದ್ರೆಯಿಲ್ಲದ ರಾತ್ರಿಗಳನ್ನು ಕೊಟ್ಟಿದ್ದಾನೆ ಎಂದರೆ ನೀವೇ ಆಲೋಚಿಸಿ ’ಎಂದು ಪ್ರಧಾನಿ ಯುನೈಟೆಡ್ ಇಂಡಿಯಾ ರ್ಯಾಲಿಗೆ ಟಾಂಗ್ ಕೊಟ್ಟರು. ದೇಶದ ಜನರು, ಮೊದಲ ಬಾರಿ ಮತಚಲಾಯಿಸುವವರು ವಿಪಕ್ಷಗಳ ಈ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ಹೊವಿಟ್ಜರ್ ಸವಾರಿ ಮಾಡಿದ ನಮೋ

ಸೂರತ್: ದೇಶದ ಮೊದಲ ಹೊವಿಟ್ಜರ್ ಗನ್ ಉತ್ಪಾದನೆಯ ಖಾಸಗಿ ಘಟಕವನ್ನು ಶನಿವಾರ ಹಜಿರಾದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದರು. ಕೆ9 ವಜ್ರ ಹೆಸರಿನ ಸ್ವಯಂನಿಯಂತ್ರಣ ಗನ್ ವ್ಯವಸ್ಥೆಯನ್ನು ಇಲ್ಲಿ ತಯಾರಿಸಲಾಗುತ್ತದೆ. ಹೊವಿಟ್ಜರ್ ಅಳವಡಿಸಲಾದ ಟ್ಯಾಂಕರ್​ನ ಒಳಗೆ ಪ್ರವೇಶಿಸಿ ಪ್ರಧಾನಿ, ಮೇಲ್ಭಾಗದಲ್ಲಿ ನಿಂತು ಕೆಲಕಾಲ ಸಂಚರಿಸಿದರು. ಸುಮಾರು 4500 ಕೋಟಿ ರೂ. ವೆಚ್ಚದಲ್ಲಿ ಹೊವಿಟ್ಜರ್ ತಯಾರಿಕಾ ಘಟಕ ನಿರ್ಮಾಣ ಒಪ್ಪಂದವನ್ನು 2017ರಲ್ಲಿ ಲಾರ್ಸನ್ ಮತ್ತು ಟೌಬ್ರೊ ಕಂಪನಿ ತನ್ನದಾಗಿಸಿಕೊಂಡಿತ್ತು. ಶಸ್ತ್ರಸಜ್ಜಿತ ವ್ಯವಸ್ಥೆಗಳ ಸಂಕೀರ್ಣ (ಎಎಸ್​ಸಿ) ಹೆಸರಲ್ಲಿ ತಯಾರಿಕಾ ಘಟಕವನ್ನು ಕಂಪನಿ ಸ್ಥಾಪಿಸಿದೆ. ಮೇಕ್ ಇನ್ ಇಂಡಿಯಾ ಯೋಜನೆ ಅನ್ವಯ ಈ ಘಟಕ ನಿರ್ವಣವಾಗಿರುವುದು ವಿಶೇಷ.

ಎಎಸ್​ಸಿ ವಿಶೇಷತೆ

# 40 ಎಕರೆ ವಿಸ್ತೀರ್ಣ
# 3.5 ವರ್ಷದಲ್ಲಿ 100 ಗನ್​ಗಳ ಉತ್ಪಾದನೆ ಸಾಮರ್ಥ್ಯ
# ಆ ಪೈಕಿ 10 ಹೊವಿಟ್ಜರ್ ವ್ಯವಸ್ಥೆಯನ್ನು ನಿಗದಿತ ಸಮಯಕ್ಕೂ ಮುನ್ನವೇ ಪೂರೈಕೆ ಮಾಡಲಾಗಿದೆ.
# ಯುದ್ಧ ಟ್ಯಾಂಕರ್, ಭವಿಷ್ಯದ ಸಮರಕ್ಕೆ ಸನ್ನದ್ಧ ವಾಹನಗಳ ತಯಾರಿಕೆ.

ತಾಯಿ ಹೀರಾ ಬಾ ಭೇಟಿ

ರೈಸನ್ ಗ್ರಾಮದಲ್ಲಿರುವ ತಾಯಿ ಹೀರಾ ಬಾ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿ ಆಶೀರ್ವಾದ ಪಡೆದರು. ತಾಯಿ ಮತ್ತು ಕುಟುಂಬಸ್ಥ ರೊಂದಿಗೆ ಸುಮಾರು 30 ನಿಮಿಷ ಕಳೆದರು.