ಮೋದಿ ಸರ್ಕಾರದ ಎಕ್ಸ್​ಪೈರಿ ಡೇಟ್​ ಮುಗಿದಿದೆ: ಕೋಲ್ಕತಾ ರ‍್ಯಾಲಿಯಲ್ಲಿ ಮಮತಾ ವ್ಯಂಗ್ಯ

ಕೋಲ್ಕತಾ: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಇಂದು ತಮ್ಮ ನೇತೃತ್ವದಲ್ಲಿ ನಡೆದ ಬಿಜೆಪಿಯೇತರ ಪಕ್ಷಗಳ ಬೃಹತ್​ ಸಮಾವೇಶದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾಜರ್ಜಿ ಅವರು ಕೇಂದ್ರ ಸರ್ಕಾರ, ಮೋದಿ, ಬಿಜೆಪಿಯ ವಿರುದ್ಧ ಕಟುವಾದ ಟೀಕೆ ಮಾಡಿದ್ದಾರೆ.

ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಎಕ್ಸ್​ಪೈರಿ ಡೇಟ್​ ಮುಗಿದು ಹೋಗಿದೆ ಎಂದು ಅವರು ವ್ಯಂಗ್ಯವನ್ನೂ ಮಾಡಿದ್ದಾರೆ.

ಮಹಾಘಟಬಂಧನದ ವೇದಿಕೆ ಎಂದೇ ಕರೆಯಲಾಗುತ್ತಿರುವ, ಬಿಜೆಪಿಯೇತರ ಪಕ್ಷಗಳ ಯುನೈಟೆಡ್ ಇಂಡಿಯಾ ರ‍್ಯಾಲಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ದೀದಿ, ” ಸದ್ಯ ನಾವು (ಬಿಜೆಪಿಯೇತರ ಪಕ್ಷಗಳು) ಚುನಾವಣೆಯಲ್ಲಿ ಒಂದೇ ವೇದಿಕೆಯಡಿ ಹೋರಾಡುವ ದೃಢ ಸಂಕಲ್ಪ ಮಾಡಿದ್ದೇವೆ. ಪ್ರಧಾನ ಮಂತ್ರಿಯನ್ನು ಚುನಾವಣೆ ನಂತರ ನಿರ್ಧಾರ ಮಾಡಲಾಗವುದು. ಒಟ್ಟಿಗೆ ಕೆಲಸ ಮಾಡಲು ನಾವು ಪ್ರಮಾಣ ಮಾಡಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದರು.

ರಾಜನಾಥ್​ ಸಿಂಗ್​, ಸುಷ್ಮಾ ಸ್ವರಾಜ್​, ನಿತಿನ್​ ಗಡ್ಕರಿಯಂಥ ದೊಡ್ಡ ದೊಡ್ಡ ನಾಯಕರೆಲ್ಲರೂ ಬಿಜೆಪಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಬಿಜೆಪಿ ಮತ್ತೊಮ್ಮೆ ಗೆದ್ದರೆ ಅವರೆಲ್ಲರೂ ಮತ್ತೆ ನಿರ್ಲಕ್ಷ್ಯಕ್ಕೊಳಗಾಗಲಿದ್ದಾರೆ,” ಎಂದು ಅವರು ಹೇಳಿದರು.

ಇದೇ ವೇಳೆ ಮಮತಾ ಬ್ಯಾನರ್ಜಿ ಅವರು ವೇದಿಕೆ ಮೂಲಕ ಘೋಷಣೆಯೊಂದನ್ನು ಮೊಳಗಿಸಿದರು. “ಬದಲ್​ ದೊ ಬದಲ್​ ದೊ ದೆಹಲಿ ಕ ಸರ್ಕಾರ್​ ಬದಲ್​ ದೋ, ( ಬದಲಿಸಿ ಬದಲಿಸಿ ದೆಹಲಿ ಸರ್ಕಾರ ಬದಲಿಸಿ)” ಎಂದು ಅವರು ಘೋಷಣೆ ಕೂಗಿದರು.f