ಬೆಂಬಲ ಬೆಲೆ ಹೆಚ್ಚಿಸಿ ರೈತರಿಗೆ ಬಂಪರ್‌ ಗಿಫ್ಟ್‌ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಅಂತೂ ಇಂತು 2019ರ ಲೋಕಸಭಾ ಚುನಾವಣೆಗೂ ಮುನ್ನವೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಭರ್ಜರಿ ಗಿಫ್ಟ್‌ ನೀಡಿದೆ.

ಕೇಂದ್ರ ಸಚಿವ ಸಂಪುಟ 2018-19ನೇ ಸಾಲಿನ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಮಿನಿಮಮ್‌ ಸಪೋರ್ಟ್‌ ಪ್ರೈಸ್‌) ನೀಡುವ ಕುರಿತು ಒಪ್ಪಿಗೆ ಸೂಚಿಸಿದೆ.

ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದಂತೆಯೇ ಮುಂಗಾರು ಬೆಳೆಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಾಲಿನಷ್ಟು ಬೆಂಬಲ ಬೆಲೆಯನ್ನು ಹೆಚ್ಚಿಸಿದೆ.

ಭತ್ತಕ್ಕೆ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ ರೂ. 200ರನ್ನು ಹೆಚ್ಚಿಸಲಾಗಿದೆ. ಈ ಹಿಂದೆ 2017-18ರಲ್ಲಿ ಕ್ವಿಂಟಾಲ್​ಗೆ 1550 ರೂ. ನಿಗದಿಯಾಗಿತ್ತು. ಆಗ ಕೇವಲ 80 ರೂ. ಬೆಂಬಲ ಬೆಲೆಯನ್ನು ಘೋಷಿಸಿತ್ತು.

ಮಧ್ಯಮ ಗುಣಮಟ್ಟದ ಪ್ರತಿ ಕ್ವಿಂಟಾಲ್‌ ಹತ್ತಿ ಬೆಂಬಲ ಬೆಲೆಯನ್ನು 4,020 ರಿಂದ 5,150ಕ್ಕೆ ಏರಿಸಲಾಗಿದೆ. ಉತ್ತಮ ಗುಣಮಟ್ಟದ ಕ್ವಿಂಟಾಲ್‌ ಹತ್ತಿಗೆ 4,320 ರೂ.ಗಳಿಂದ 5,450 ರೂ.ಗೆ ಏರಿಸಲಾಗಿದೆ. ತೊಗರಿ ಕ್ವಿಂಟಾಲ್‌ಗೆ 5,450 ರೂ.ನಿಂದ 5,675 ರೂ.ಗೆ ಏರಿಸಲಾಗಿದೆ. ಹೆಸರುಕಾಳಿಗೆ 5,575 ರಿಂದ 6,975 ರೂ. ಹೆಚ್ಚಿಸಲಾಗಿದೆ. ಉದ್ದು ಕ್ವಿಂಟಾಲ್‌ಗೆ 5,400 ರಿಂದ 5,600 ರೂ. ನಿಗದಿಗೊಳಿಸಲಾಗಿದೆ.

ಒಟ್ಟಾರೆ ಬೆಂಬಲ ಬೆಲೆ ಹೆಚ್ಚಳದಿಂದಾಗಿ ಸರ್ಕಾರಕ್ಕೆ 33,500 ಕೋಟಿ ಹೊರೆಯಾಗಲಿದ್ದು, ಜಿಡಿಪಿಯಲ್ಲಿ ಶೇ. 0.2 ರಷ್ಟಾಗಿದೆ. ಭತ್ತಕ್ಕೆ ನಿಗದಿ ಮಾಡಿರುವ ಬೆಂಬಲ ಬೆಲೆಯಿಂದಲೇ ಸುಮಾರು ರೂ. 12,300 ಕೋಟಿಯಷ್ಟಾಗಲಿದೆ.

ಇನ್ನು ಈ ಕುರಿತು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಪ್ರತಿಕ್ರಿಯಿಸಿ, ಕನಿಷ್ಠ ಬೆಂಬಲ ಬೆಲೆ ನಿಗದಿಯಿಂದಾಗಿ ಹಣದುಬ್ಬರ ಉಂಟಾಗುವ ಭೀತಿ ಎದುರಾಗಿದ್ದು, ರೈತರ ಕಲ್ಯಾಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)