ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಈ ಬಾರಿ ರಸಗುಲ್ಲಾ ಸಿಗಲಿದೆ: ಮಮತಾ ಬ್ಯಾನರ್ಜಿ

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್​ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಬಿಜೆಪಿ ಮತ್ತು ತೃಣಮೂಲ ನಾಯಕರು ಪರಸ್ಪರರ ಮೇಲೆ ವಾಗ್ದಾಳಿ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಆದರೆ, ಇಂದು ಸಿಎಂ ಮಮತಾ ಬ್ಯಾನರ್ಜಿ ರಾಜ್ಯದ ಜನತೆ ಬಿಜೆಪಿಗೆ ಈ ಬಾರಿ ರಸಗುಲ್ಲಾ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಬಾಲೂರ್ಘಾಟ್ ಮತ್ತು ಗಂಗರಂಪುರ್​ನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ‘ದೆಹಲಿಯ ಲಡ್ಡು ತಿಂದವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. 2014ರಲ್ಲಿ ರಾಜ್ಯದಲ್ಲಿ 2 ಸೀಟುಗಳಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿತ್ತು. ಆದರೆ, ಈ ಬಾರಿ ಬಿಜೆಪಿಗೆ ರಸಗುಲ್ಲಾ ಸಿಗಲಿದೆ. ಅಂದರೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ ಎಂದು ವಾಗ್ದಾಳಿ ನಡೆಸಿದರು.

2016ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕೊಟ್ಟರೆ ಜನರ ಎರಡೂ ಕೈಗೆ ಲಡ್ಡು ಸಿಗಲಿದೆ. ಅಂದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿದ್ದು, ಅಭಿವೃದ್ಧಿ ಕಾರ್ಯಗಳು ಯಾವುದೇ ಅಡೆ ಇಲ್ಲದೆ ನಡೆಯಲಿದೆ ಎಂದು ತಿಳಿಸಿದ್ದರು.

ಈಗ ಮೋದಿ ಅವರ ಲಡ್ಡು ಹೇಳಿಕೆಗೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮಾತ್ರವಲ್ಲ ಈಶಾನ್ಯ ರಾಜ್ಯಗಳು ಮತ್ತು ಒಡಿಶಾದಲ್ಲೂ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ. ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಬಿಜೆಪಿ 73 ಸೀಟುಗಳನ್ನು ಗೆದ್ದಿತ್ತು. ಈ ಬಾರಿ 13 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು ಸಿಗುವುದೂ ಕಷ್ಟವಿದೆ ಎಂದು ಭವಿಷ್ಯ ನುಡಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *