ಮೋದಿ VS ಎಚ್​ಡಿಕೆ

ನವದೆಹಲಿ: ಕರ್ನಾಟಕ ಸರ್ಕಾರದ ಸಾಲಮನ್ನಾ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಇತ್ತೀಚೆಗೆ ಟೀಕಾ ಪ್ರಹಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಮತ್ತೊಮ್ಮೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

‘ಕರ್ನಾಟಕದಲ್ಲಿ ದೋಸ್ತಿ ಸರ್ಕಾರ ಬಂದು ಕೆಲ ತಿಂಗಳಾಗಿವೆ. ಆದರೆ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಕ್ಲರ್ಕ್ ಮಟ್ಟಕ್ಕೆ ತಂದಿಟ್ಟಿದೆ ಎಂದು ಸಿಎಂ ಕುಮಾರಸ್ವಾಮಿಯೇ ಹೇಳಿಕೊಳ್ಳುತ್ತಿದ್ದಾರೆ. ಇದು ಮಹಾಮೈತ್ರಿಯ ಹಣೆಬರಹ’ ಎಂದು ನವದೆಹಲಿಯಲ್ಲಿ ಶನಿವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪ ದಲ್ಲಿ ಪ್ರಧಾನಿ ಮೋದಿ ಹೇಳಿದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಕ್ಲರ್ಕ್ ಆಗಿದ್ದರೆ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮೈತ್ರಿ ಪಕ್ಷಗಳು ಬೆದರಿಕೆ ಹಾಕಿ ಪಕ್ಷದ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಿಕೊಳ್ಳುತ್ತಿವೆ. ರಾಷ್ಟ್ರಮಟ್ಟದಲ್ಲಿ ಮಹಾಮೈತ್ರಿ ಏರ್ಪಟ್ಟು ಸರ್ಕಾರ ರಚನೆಯಾದರೂ ಇದೇ ಪರಿಸ್ಥಿತಿ ನಿರ್ವಣವಾಗುತ್ತದೆ. ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡರೆ ಕರ್ನಾಟಕದ ಸ್ಥಿತಿ ದೇಶದೆಲ್ಲೆಡೆ ನಿರ್ವಣವಾಗಲಿದೆ ಎಂದು ಪ್ರಧಾನಿ ಹೇಳಿದರು.

ದೋಸ್ತಿಗಳ ತಿರುಗೇಟು: ಪ್ರಧಾನಿ ಹೇಳಿಕೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ‘ನಾನು ಹಾಗೆ ಹೇಳಿರಲಿಲ್ಲ. ತಪ್ಪು ಮಾಹಿತಿ ಪಡೆದ ಪ್ರಧಾನಿ ನನ್ನನ್ನು ಟೀಕಿಸಿದ್ದಾರೆ’ ಎಂದು ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾಮೈತ್ರಿಕೂಟ ಕಳ್ಳರ ಸಂತೆಯಾದರೆ, ಎನ್​ಡಿಎ ಕೂಡ ಮೈತ್ರಿಕೂಟ ಅಲ್ಲವೇ? ವೃಥಾರೋಪ ಮಾಡುವ ಮೊದಲು ಅವರು ತಮ್ಮ ಬಗ್ಗೆ ನೋಡಿಕೊಳ್ಳಲಿ. ಮೋದಿ ಸರ್ಕಾರ ಎಲ್ಲ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಸಿಬಿಐ, ಸಿವಿಸಿ, ಇ.ಡಿ.ಯನ್ನು ನಿಯಂತ್ರಿಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಸಂಕ್ರಾಂತಿಗೆ ಡೆಡ್​ಲೈನ್ ಹಾಕಿರುವಂತೆ ಕ್ರಾಂತಿಯೇನೂ ಆಗುವುದಿಲ್ಲ. ಬಿಜೆಪಿಯವರು ತಮ್ಮ ಮನೆಗಳಲ್ಲಿ ಸಂಕ್ರಾಂತಿ ಹಬ್ಬ ಮಾಡುತ್ತಾರೆ ಅಷ್ಟೇ.

| ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಗೌರವಾನ್ವಿತ ಮೋದಿಯವರು ಪದೇಪದೆ ಸುಳ್ಳು ಹೇಳುತ್ತಿದ್ದಾರೆ. ಹಿಂದೆ ಋಣಭಾರದ ವಿಚಾರ ದಲ್ಲಿ ಸುಳ್ಳು ಹೇಳಿದ್ದರು. ಈಗ ಕ್ಲರ್ಕ್ ಎಂದು ಸುಳ್ಳು ಹೇಳಿದ್ದಾರೆ.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಸಿಎಂ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಟೀಕೆ ಸರಿಯಲ್ಲ.

| ಜಿ.ಪರಮೇಶ್ವರ್ ಡಿಸಿಎಂ

ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ನಾಯಕರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ.

| ಸಿದ್ದರಾಮಯ್ಯ ಮಾಜಿ ಸಿಎಂ

ಮೋದಿಯವರು ಸರಿಯಾಗಿಯೇ ಮಾತನಾಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯ ನೈಜ ಸ್ಥಿತಿಯನ್ನು ಹೇಳಿದ್ದಾರೆ.

| ಆರ್.ಅಶೋಕ್ ಮಾಜಿ ಡಿಸಿಎಂ