ಮಾಂಜರಿ: ಮೋದಿ ದೆಸೆಯಿಂದ ದೇಶ ಪರಿವರ್ತನೆ

ಮಾಂಜರಿ: ಪ್ರಧಾನಿ ಮೋದಿ ದೂರದೃಷ್ಟಿಯಿಂದ ಭಾರತವನ್ನು ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

ಸಮೀಪದ ಮಾಂಗೂರ ಗ್ರಾಮದ ಶ್ರೀ ಬೀರೇಶ್ವರ ಸೌಹಾರ್ದ ಬ್ಯಾಂಕ್ ಶಾಖೆಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಪ್ರಧಾನಿ ಮೋದಿ ದೇಶದ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಅಂತಹ ಪ್ರಧಾನಿಯ ಅವಶ್ಯಕತೆ ದೇಶಕ್ಕೆ ಇರುವುದರಿಂದ ಬಿಜೆಪಿಗೆ ಮತ ಚಲಾಯಿಸುವ ಮೂಲಕ ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಬೇಕು. ಪ್ರಧಾನಿ ಮೋದಿಯ ಕಾರ್ಯವೈಖರಿ ಮತ್ತು ಐದು ವರ್ಷದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಸಾಧನೆ ಮುಂದಿಟ್ಟು ಕಾರ್ಯಕರ್ತರು ಮತಯಾಚಿಸಬೇಕು ಎಂದು ತಿಳಿಸಿದರು.

ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮತ ನೀಡಿ ಮೋದಿ ಅವರ ಕೈಬಲಪಡಿಸಬೇಕು. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಹಲವು ಹಗರಣ ನಡೆದಿದ್ದು, ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ವಿಲಾಸರಾವ್ ಮಂಜೂರ, ವಿಜಯೇಂದ್ರ ಮಾನೆ, ಮಲ್ಲಪ್ಪ ಚೌಗಲಾ, ತಾತೋಬಾ ಪಾಟೀಲ, ಅಭಿಜಿತ, ನಿತೀಶ ಖೋತ ಹಾಗೂ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.