Tuesday, 11th December 2018  

Vijayavani

Breaking News

ಕಡೆಗೂ ಭೂಕಂಪ ಸಂಭವಿಸಿತು, ವಿಪಕ್ಷ ವಿರುದ್ಧ ಪ್ರಧಾನಿ ವ್ಯಂಗ್ಯ

Tuesday, 07.02.2017, 2:21 PM       No Comments

ನಮಗೆ ರಾಷ್ಟ್ರಹಿತ ‘ಸುಪ್ರೀಂ’, ಚುನಾವಣಾ ಲಾಭವಲ್ಲ

ನವದೆಹಲಿ: ‘ಕಡೆಗೂ ಭೂಕಂಪ ಸಂಭವಿಸಿತು- ಭೂಮಾತೆ ಸಿಟ್ಟಿಗೆದ್ದಿರಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಸತ್ತಿನಲ್ಲಿ ಹೇಳಿದರು. ನೋಟು ನಿಷೇಧಿಸಿದಾಗ, ತಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸದೆಯೇ ಈ ಮಾತುಗಳನ್ನು ಹೇಳುವ ಮೂಲಕ ಅವರು ವಿಪಕ್ಷಗಳಿಗೆ ಚುಚ್ಚಿದರು.

ದೆಹಲಿ, ಉತ್ತರಾಖಂಡ ಸೇರಿದಂತೆ ಉತ್ತರ ಭಾರತದ ಹಲವಡೆ ಪ್ರಬಲ ಭೂಕಂಪ ಸಂಭವಿಸಿದ ಕೆಲವು ಗಂಟೆಗಳ ಬಳಿಕ ಮಾತನಾಡಿದ ಪ್ರಧಾನಿ ರಾಷ್ಟ್ರಪತಿಯವರು ಮುಂಗಡಪತ್ರ ಅಧಿವೇಶನದ ಆರಂಭದ ದಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸಿದ ನಿರ್ಣಯ ಮೇಲೆ ನಡೆದ ಚರ್ಚೆಗೆ ಲೋಕಸಭೆಯಲ್ಲಿ ಮಂಗಳವಾರ ಉತ್ತರ ನೀಡಿದರು.

ಭೂಕಂಪ ಸಂಭವಿಸಿದ ರಾಜ್ಯಗಳ ಜೊತೆಗೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ. ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ನುಡಿದರು. ‘ವಿವಿಧ ಸದಸ್ಯರು ಸದನ ಕಲಾಪದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಚರ್ಚೆಗೆ ಶಕ್ತಿ ತುಂಬಿದ್ದಾರೆ, ಸಂಸತ್ ಸದಸ್ಯರು ಪಾಲ್ಗೊಳ್ಳುವಿಕೆಗೆ ವಂದನೆ ಅರ್ಪಿಸುವೆ ಎಂದು ಮೋದಿ ಹೇಳಿದರು.

ಈ ರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಕ್ಕಾಗಿ ಮಡಿಯದ ನನ್ನಂತಹ ಹಲವಾರು ಜನರಿದ್ದಾರೆ. ಆದರೆ ನಾವು ಭಾರತಕ್ಕಾಗಿ ಬದುಕುತ್ತಿದ್ದೇವೆ, ಮತ್ತು ಸೇವೆ ಸಲ್ಲಿಸುತ್ತಿದ್ದೇವೆ, ಆದರೆ ‘ಸ್ಕ್ಯಾಮ್ ಪದದಲ್ಲಿ ‘ಸೇವೆ’ ಕಾಣಲು ಸಾಧ್ಯವೇ ಎಂದು ಮೋದಿ ಪ್ರಶ್ನಿಸಿದರು.

‘ಜನಶಕ್ತಿ’ಯಲ್ಲಿ ವಿಶೇಷ ಇದೆ. ಈ ‘ಜನಶಕ್ತಿ’ಯ ಕಾರಣವೇ ಬಡ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ ಭಾರತದ ಪ್ರಧಾನಿ ಆಗಿದ್ದಾನೆ ಎಂದು ಪ್ರಧಾನಿ ಹೇಳಿದರು.

‘ನೀವು ಯಾವಾಗ ಆಪರೇಷನ್ ಮಾಡುತ್ತೀರಿ? ದೇಹ ಸದೃಢವಾಗಿದ್ದಾಗ ಮಾತ್ರ. ಆರ್ಥಿಕತೆ ಉತ್ತಮವಾಗಿತ್ತು. ಆದ್ದರಿಮದ ಸರಿಯಾದ ಸಮಯದಲ್ಲಿ ನೋಟು ನಿಷೇಧದ ಕ್ರಮ ಕೈಗೊಳ್ಳಲಾಯಿತು’ ಎಂದು ನೋಟು ನಿಷೇಧದ ಬಗ್ಗೆ ಪ್ರಸ್ತಾಪಿಸುತ್ತಾ ಮೋದಿ ನುಡಿದರು. ಪ್ರತಿಯೊಬ್ಬ ಪ್ರಧಾನಿಯೂ ರಾಷ್ಟ್ರಕ್ಕೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.

ಹಿಂದೆ ಜನ ನನ್ನಲ್ಲಿ ನಾವು ಕಳೆದುಕೊಂಡದ್ದು ಎಷ್ಟು ಎಂದು ಕೇಳುತ್ತಿದ್ದರು. ಈಗ ಮೋದಿಜಿ ನೀವು ಎಷ್ಟು ತಂದಿರಿ? ಎಂದು ಕೇಳುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಜನರ ಯೋಚನೆಯ ಧಾಟಿ ಬದಲಾಗಿರುವ ಪರಿ ಇದು ಎಂದು ಮೋದಿ ನುಡಿದರು.

ನೀವು ಎಷ್ಟು ದೊಡ್ಡವರು ಎಂಬುದು ಪ್ರಶ್ನೆಯಲ್ಲ, ಜನರಿಗೆ ಸೇರಿದ್ದನ್ನು ನೀವು ಎಷ್ಟು ಹಿಂದಕ್ಕೆ ಕೊಟ್ಟಿರಿ ಎಂಬುದು ಪ್ರಶ್ನೆ. ನನ್ನ ಹೋರಾಟ ಬಡವರಿಗಾಗಿ. ಅವರಿಗೆ ನೀಡಬೇಕಾದ್ದನ್ನು ನೀಡುವುದಕ್ಕಾಗಿ. ಅದು ಮುಂದುವರೆಯುತ್ತದೆ. ಚುನಾವಣೆ ಗೆಲ್ಲುವುದೇ ಮುಖ್ಯ ಗುರಿಯಾಗಿದ್ದುದರಿಂದ ಕಾಂಗ್ರೆಸ್ ಕಾಲದಲ್ಲಿ ಪರ್ಯಾಯ ಆರ್ಥಿಕ ವ್ಯವಸ್ಥೆ ಬೆಳೆಯಿತು. ನಾವು ರಾಷ್ಟ್ರದ ಹಿತ ಬಗ್ಗೆ ಗಮನ ಇಟ್ಟಿದ್ದೇವೆ. ರಾಷ್ಟ್ರ ಹಿತವೇ ನಮಗೆ ಸುಪ್ರೀಂ. ಪ್ರತಿಯೊಂದನ್ನು ಚುನಾವಣಾ ಲಾಭದ ಮೇಲೆ ಕಣ್ಣಿಟ್ಟುಕೊಂಡು ನಾವು ಮಾಡುವುದಿಲ್ಲ, ಚುನಾವಣೆಯ ಚಿಂತೆ ನಮಗಿಲ್ಲ ಎಂದು ಅವರು ಹೇಳಿದರು.

-ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top