ಮಕ್ಕಳನ್ನು ಅಧಃಪತನಕ್ಕೆ ತಳ್ಳುವ ಆಧುನಿಕ ಶಿಕ್ಷಣ

blank
blank

ಹಳೇಬೀಡು: ಸನಾತನ ಸಂಸ್ಕೃತಿಯ ಅರಿವಿಲ್ಲದೆ ಪಡೆಯುವ ಪಾಶ್ಚಾತ್ಯ ಮಾದರಿಯ ಶಿಕ್ಷಣವು ವಿದ್ಯಾರ್ಥಿಗಳನ್ನು ಅಧಃಪತನಕ್ಕೆ ತಳ್ಳುತ್ತದೆ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಭಾನುವಾರ ಪಟ್ಟಣದ ಎಸ್.ಜಿ.ಆರ್. ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ವಚನಾಮೃತ ವಿಶೇಷ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನೈತಿಕ ಮೌಲ್ಯಗಳನ್ನು ತಿಳಿಸಿಕೊಡದಿದ್ದರೆ ಶಿಕ್ಷಣವು ಅಪೂರ್ಣವಾಗುತ್ತದೆ. ತಥಾಕಥಿತ ಪಾಠ ಪ್ರವಚನಗಳಿಂದ ಮಕ್ಕಳ ಜ್ಞಾನದ ಮಟ್ಟ ಕುಸಿಯುವುದಲ್ಲದೆ, ಕ್ರಮೇಣ ಗುರುವನ್ನೇ ಲಘುವಾಗಿ ಪರಿಗಣಿಸಿ ಅಪಹಾಸ್ಯ ಮಾಡುವ ಮಟ್ಟಕ್ಕೂ ಮಕ್ಕಳು ಬೆಳೆಯುತ್ತಾರೆ. ಕಳೆದ ವರ್ಷ ಜಾನಪದ ವೈಭವದ ಮೂಲಕ ವಾರ್ಷಿಕೋತ್ಸವ ಆಚರಿಸಿದ್ದ ಶಿಕ್ಷಣ ಸಂಸ್ಥೆಯಲ್ಲಿ ಈ ಬಾರಿ ವಚನ ಸಂಭ್ರಮವನ್ನು ಅನಾವರಣ ಮಾಡುತ್ತಿರುವುದು ಶ್ಲಾಘನೀಯ.

ಬಸವಾದಿ ಶರಣರು ನಡೆಸಿದ ಸಾಮಾಜಿಕ ಕ್ರಾಂತಿಯಿಂದ ಧರ್ಮದ ಬೇರು ಗಟ್ಟಿಯಾಗಿ, ಅನಿಷ್ಟ ಪದ್ಧತಿಗಳು ತೊಲಗಿದವು. ಜನರು ಸುಜ್ಞಾನಿಗಳಾದರು. ಆದರೆ, ಇಂದು ಪಠ್ಯ ಹಾಗೂ ಪರೀಕ್ಷಾ ಕೇಂದ್ರಿತ ಶಿಕ್ಷಣದಿಂದ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ, ಮಾನವೀಯತೆ, ಸಹಕಾರ ಮನೋಭಾವವು ಇಲ್ಲದಂತಾಗಿದ್ದು, ಯಾವುದೋ ಯಾಂತ್ರಿಕ ಬದುಕಿನ ಸುಳಿಯಲ್ಲಿ ಸಿಲುಕಿ ಬದುಕು ನಡೆಸುತ್ತಿದ್ದಾರೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುಗೆ ನೀಡಬೇಕು. ಅದಕ್ಕೆ ವಚನಗಳನ್ನು ಮೂಲಾಧಾರವಾಗಿ ಇಟ್ಟುಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿನ ವ್ಯವಸ್ಥೆ ಹಾಗೂ ಪಠ್ಯಕ್ರಮದ ಬಗ್ಗೆ ಪಾಲಕರಿಗೆ ಅಸಮಾಧಾನವಿದ್ದರೆ ಅದನ್ನು ನೇರವಾಗಿ ಶಿಕ್ಷಕರ ಮುಂದೆಯೇ ಹೇಳಬೇಕು. ಮಕ್ಕಳ ಎದುರು ಸಂಸ್ಥೆಯನ್ನು ಮತ್ತು ಶಿಕ್ಷಕರನ್ನು ನಿಂದಿಸುವುದು, ಕೀಳು ಭಾಷೆ ಪ್ರಯೋಗ ಮಾಡುವುದು ಮುಂತಾದವುಗಳಿಂದ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುತ್ತದೆ. ಅವರಲ್ಲಿ ಕೆಟ್ಟ ಮನೋಭಾವ ಬೆಳೆಯಲು ಪಾಲಕರೇ ಕಾರಣರಾಗುತ್ತಾರೆ. ಎರಡು ಅಂಕ ಕಡಿಮೆ ಬಂದರೂ ತೊಂದರೆಯಿಲ್ಲ, ಆದರೆ ಉತ್ತಮ ಗುಣವನ್ನು ಹೊಂದುವ ಮಕ್ಕಳನ್ನು ತಯಾರು ಮಾಡಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಸಿದ್ದೇಶ್, ಬಿ.ಎಲ್.ಮಮತಾ, ಮಂಜುಳಾ ಸುರೇಶ್, ರಾಮೇಗೌಡ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಇತರರಿದ್ದರು.

ಪರವಶಗೊಳಿಸಿದ ವಚನಾಮೃತ ವೈಭವ: ಬಸವಾದಿ ಶರಣರ ವಚನಗಳನ್ನು ನೃತ್ಯ ರೂಪಕ್ಕೆ ಅಳವಡಿಸಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ರೀತಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಚಲನಚಿತ್ರ ಗೀತೆಗಳಿಗೆ ಕುಣಿಯುವುದಕ್ಕಿಂತಲೂ ಜಾನಪದ, ಭಾವಗೀತೆ ಮತ್ತು ಈ ರೀತಿ ವಿಭಿನ್ನ ವಚನಾಮೃತ ಪ್ರಯೋಗವು ಅತ್ಯುತ್ತಮ ಎಂಬ ಅಭಿಪ್ರಾಯ ವ್ಯಕ್ತವಾಯಿತು. ದಯೆಯೇ ಧರ್ಮದ ಮೂಲ, ಇವನಾರವನೆಂದೆಣಿಸದಿರಯ್ಯ, ಉಳ್ಳವರು ಶಿವಾಲಯವ ಮಾಡುವರು ಮುಂತಾದ ಅನೇಕ ಶರಣರ ವಚನಗಳನ್ನು ಆರಿಸಿಕೊಂಡು ಅದನ್ನು ನೃತ್ಯರೂಪಕದಲ್ಲಿ ಅಳವಡಿಸಿ ಪ್ರದರ್ಶಿಸಿದರು.

Share This Article

ಮೀನಿನ ಕಣ್ಣು ಆರೋಗ್ಯಕ್ಕೆ ಉತ್ತಮ! ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Fish Eye

Fish Eye: ಮೀನಿನ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಅದಕ್ಕಿಂತ ಹೆಚ್ಚಿನ ಆರೋಗ್ಯಕಾರಿ ಅಂಶಗಳು ಮೀನಿನ…

ಪಾರ್ಲಿಮೆಂಟ್​ ಮೆನುವಿನಲ್ಲಿ ರಾಗಿ ಇಡ್ಲಿ ದರ್ಬಾರ್​! ಮಾಡೊದೇಗೆ? ಇಲ್ಲಿದೆ ಸಿಂಪಲ್ಸ್​ ಟಿಪ್ಸ್​​.. | Ragi Idli

Ragi Idli : ಇತ್ತೀಚಿನ ವೇಗದ ಆಧುನಿಕ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದೆ ಕಷ್ಟವಾಗಿದೆ. ಆದರಲ್ಲೂ ಪಟ್ಟಣ…