ಸ್ವಚ್ಛತಾ ಕಾರ್ಯದಲ್ಲಿ ಮಾದರಿ ಮಾಧವಿ ಕಡಾರಿ

ಆರ್.ಬಿ. ಜಗದೀಶ್, ಕಾರ್ಕಳ
15 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮಾಧವಿ ಕಡಾರಿ ಒಂದೂವರೆ ವರ್ಷಗಳಿಂದ ಸ್ವಚ್ಛತಾ ಕಾರ್ಯ ಸವಾಲಾಗಿ ಸ್ವೀಕರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಮುಡಾರು ಹಾಗೂ ನಲ್ಲೂರಿನಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಘಟಕದಲ್ಲಿ ಮೇಲ್ವಿಚಾರಣೆ ಮಾಡುತ್ತಿರುವ ಮಾಧವಿ ಕಡಾರಿ ತಾವೇ ಕಸ ಸಂಗ್ರಹದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರೊಂದಿಗೆ ಐವರು ಸಹಾಯಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಮನೋಭಾವದಿಂದ ಕೆಲಸ ಮಾಡುವ ಇವರು ಪಡೆಯುವುದು ಗೌರವ ಧನ ಮಾತ್ರ.

ಘನ ತ್ಯಾಜ್ಯ ಸಂಗ್ರಹ ವಿವರ: ಮುಡೂರು ಮತ್ತು ನಲ್ಲೂರು ಘಟಕದಲ್ಲಿ ಒಂದು ವರ್ಷದ ಅವಧಿಯಲ್ಲಿ ಪರಿಸರಕ್ಕೆ ಮಾರಕವಾದ 2,500 ಕೆ.ಜಿ. ಪ್ಲಾಸ್ಟಿಕ್ ಕವರ್, 1,200 ಕೆ.ಜಿ. ಪ್ಲಾಸ್ಟಿಕ್ ವಸ್ತು ಸಂಗ್ರಹಿಸಿರುವುದು ಗಮನಾರ್ಹ. ಕಸ ವಿಲೇವಾರಿಗೆ ಸೇವಾ ಶುಲ್ಕ ವಿಧಿಸಲಾಗುತ್ತದೆ. ಸಂಗ್ರಹವಾದ ಕಸವನ್ನು 21 ಬಗೆಯಲ್ಲಿ ಪ್ರತ್ಯೇಕಿಸಿ ತೂಕ ಮಾಡಿ ಲೆಕ್ಕ ಪತ್ರವನ್ನಿಡಬೇಕು. ಅದಕ್ಕೆ ಪ್ರತ್ಯೇಕವಾಗಿ ಖಾತೆ ಒಳಗೊಂಡಿರುತ್ತದೆ. ಸೊಸೈಟಿ ಕಾಯಿದೆ ಅನುಸಾರ ನೋಂದಣಿಯಾದ ಸಂಸ್ಥೆ ಇದಾಗಿದೆ.

ಸಮಾಜಮುಖಿ ಕಾರ‌್ಯ: ಮೂಲತಃ ಮಾಳ ಕಡಾರಿಯವರಾದ ಮಾಧವಿ, ಪ್ರಸ್ತುತ ಕಾರ್ಕಳ ನಗರದ ಸಾಲ್ಮರ್ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದಾರೆ. ಪಿಯುಸಿ ವಿದ್ಯಾಭ್ಯಾಸ ಮಾಡಿರುವ ಇವರು, ಸ್ವಾವಲಂಬಿ ಬದುಕಿಗೆ ದುಡಿಮೆಯಲ್ಲಿ ಅಸಹ್ಯ ಪಡಬಾರದು. ಛಲ ಮತ್ತು ಆತ್ಮವಿಶ್ವಾಸ ಇದ್ದರೆ ಯಶಸ್ಸು ಕಾಣಲು ಸಾಧ್ಯ ಎಂದು ನಿರೂಪಿಸಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದು, ಹಿರಿಯಾತ ಗುರುಪ್ರಸಾದ್ ಅಬುದಾಭಿಯಲ್ಲಿ ಕಂಪ್ಯೂಟರ್ ಇಂಜಿನಿಯರ್, ಕಿರಿಯ ಮಗ ಶಿವಪ್ರಸಾದ್ ಬೆಂಗಳೂರಿನ ಕಂಪನಿಯಲ್ಲಿ ಮೆಕಾನಿಕಲ್ ಇಂಜಿನಿಯರ್. ಮಾಧವಿಯವರು ಯಕ್ಷಗಾನ, ನೃತ್ಯದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಭಾರತ್ ನಿರ್ಮಾಣ್ ಸ್ವಯಂಸೇವಕ ಸಂಘಟನೆ ತಾಲೂಕು ಕಾರ್ಯದರ್ಶಿಯಾಗಿದ್ದ ಇವರು ಕಾರ್ಕಳ ಮಹಿಳಾ ಬ್ಯಾಂಕ್ ನಿರ್ದೇಶಕಿಯಾಗಿದ್ದು, ವಿವಿಧ ಮಹಿಳಾ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಕಾರ್ಯನಿರ್ವಹಣೆ ವ್ಯಾಪ್ತಿ: ಕಾರ್ಕಳ ತಾಲೂಕಿನ ಮುಡಾರು ಹಾಗೂ ನಲ್ಲೂರು( ಜಂಟಿಯಾಗಿ), ನಿಟ್ಟೆ, ಮುಂಡ್ಕೂರು, ಹೆಬ್ರಿ, ಈದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಮುಡಾರು ಹಾಗೂ ನಲ್ಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಘಟಕ ಮಾದರಿ ಘಟಕಗಳಲ್ಲಿ ಒಂದಾಗಿದೆ. ಈ ಘಟಕಕ್ಕೆ ಮನೆ, ಅಂಗಡಿ, ಹೋಟೆಲ್‌ಗಳಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸಿ ತಂದು ಪ್ರತ್ಯೇಕಿಸಲಾಗುತ್ತಿದೆ. ಶುದ್ಧೀಕರಿಸಿದ ಪ್ಲಾಸ್ಟಿಕ್, ಪೇಪರ್, ರಟ್ಟು, ಕಬ್ಬಿಣ, ವಿದ್ಯುತ್ ಯಂತ್ರೋಪಕರಣಗಳನ್ನು ಡೀಲರ್‌ಗಳು ಬಂದು ಪಡೆದುಕೊಂಡು ಹೋಗುತ್ತಾರೆ. ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಮಾರ್ಪಡಿಸಲಾಗುತ್ತದೆ.

ಸ್ವಚ್ಛ ಪರಿಸರ ನಿರ್ಮಾಣಕ್ಕೆ ಊರವರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಜನಜಾಗೃತಿಯೊಂದಿಗೆ ಆಡಳಿತಾತ್ಮಕವಾಗಿ ಕಾನೂನು ಕ್ರಮ ಕೈಗೊಳ್ಳುವಂತಿರಬೇಕು.
ಮಾಧವಿ ಕಡಾರಿ
ಮೇಲ್ವಿಚಾರಕಿ, ಮುಡಾರು ಹಾಗೂ ನಲ್ಲೂರು ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಘಟಕ 

Leave a Reply

Your email address will not be published. Required fields are marked *