ಮಾದರಿ ಲಗ್ನ ಪತ್ರಿಕೆಗೆ ಸೃಜನಶೀಲ ಪ್ರಶಸ್ತಿ

ಅಕ್ಕಿಆಲೂರ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲಗ್ನ ಪತ್ರಿಕೆಯನ್ನು ಮತದಾನ ಗುರುತಿನ ಚೀಟಿ ರೀತಿಯಲ್ಲಿ ವಿನ್ಯಾಸ ಮಾಡಿ ಜಾಗೃತಿ ಮೂಡಿಸಿದ್ದಕ್ಕೆ ಉತ್ತರ ಪ್ರದೇಶದ ‘ಇನ್ ಕ್ರೆಡಿಬಲ್ ಬುಕ್ ಆಫ್ ರಿಕಾರ್ಡ್’ ವತಿಯಿಂದ ‘ಸಾಮಾಜಿಕ ಜಾಗೃತಿಯ ಅತ್ಯುತ್ತಮ ಸೃಜನಶೀಲ ಪತ್ರಿಕೆ’ ಪ್ರಶಸ್ತಿ ಲಭಿಸಿದೆ.

ಕಳೆದ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಉಪ್ಪಣಸಿ ಗ್ರಾಮದ ಸಿದ್ದಪ್ಪ ದೊಡ್ಡಚಿಕ್ಕಣ್ಣನವರ ಅವರ ಮದುವೆ ಆಮಂತ್ರಣವನ್ನು ಓಟರ್ ಐಡಿ ಮಾದರಿಯಲ್ಲಿ ವಿನೂತನವಾಗಿ ಸಿದ್ಧಪಡಿಸಿ, ಮತದಾನದ ಕುರಿತು ಜಾಗೃತಿ ಮೂಡಿಸಲಾಗಿತ್ತು. ಚುನಾವಣೆ ಅಧಿಕಾರಿಗಳೇ ಸ್ವತಃ ಓಟರ್ ಐಡಿ ಮಾದರಿಯ ಮದುವೆ ಆಮಂತ್ರಣವನ್ನು ಜನತೆಗೆ ನೀಡುವುದರ ಮೂಲಕ ಮತದಾನ ಜಾಗೃತಿ ಮಾಡಿದ್ದರು. ಇದಕ್ಕೆ ಪೊಲೀಸ್ ಪೇದೆ ಕರಬಸಪ್ಪ ಗೊಂದಿ ಅವರ ಕ್ರಿಯಾತ್ಮಕ ವಿಚಾರ ಕಾರಣವಾಗಿತ್ತು.

ಸ್ನೇಹಿತನ ಮದುವೆ ಆಮಂತ್ರಣವನ್ನು ಓಟರ್ ಐಡಿ ಮಾದರಿಯಲ್ಲಿ ನಿರ್ವಿುಸಲು ಕಾರಣರಾದ ಕರಬಸಪ್ಪ ಅವರಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಮತ್ತು ಜಿ.ಪಂ. ಸಿಇಒ ಶಿಲ್ಪಾನಾಗ್ ಕೃತಜ್ಞತಾ ಪತ್ರ ಪ್ರದಾನ ಮಾಡಿದ್ದಾರೆ.

ಇದೀಗ ಓಟರ್ ಐಡಿ ಮಾದರಿಯ ಮದುವೆ ಆಮಂತ್ರಣ ಪತ್ರಿಕೆಗೆ ‘ಸಾಮಾಜಿಕ ಜಾಗೃತಿಯ ಸೃಜನಶೀಲ ಪತ್ರಿಕೆ’ ಪ್ರಶಸ್ತಿ ದೊರಕಿದೆ. ಅಲ್ಲದೆ, ಇಂತಹ ಕಾರ್ಯಕ್ಕೆ ಬುದ್ಧಿಮತ್ತೆ ಉಪಯೋಗಿಸಿದ ಪೊಲೀಸ್ ಪೇದೆ ಕರಬಸಪ್ಪ ಅವರಿಗೆ ಬಿಲೀವ್ ಇನ್ ಬ್ಯಾಲೆಟ್ ಪುಸ್ತಕದಲ್ಲಿ ಲೇಖನ ಬರೆಯಲು ಕೇಂದ್ರ ಚುನಾವಣಾ ಆಯೋಗ ಅವಕಾಶ ನೀಡಿದೆ. ಇನ್ನು ನವದೆಹಲಿಯ ಜಸ್ಟ್ ಟಾಕ್ ಇನ್​ಸ್ವಿಟ್ಯೂಟ್ ಈ ಮಾದರಿ ಓಟರ್ ಐಡಿ ಲಗ್ನ ಪತ್ರಿಕೆ ಬಗೆಗೆ ಸಾಕ್ಷ್ಯತ್ರ ಮಾಡಿರುವುದು ಇನ್ನೊಂದು ವಿಶೇಷ.

ಕರಬಸಪ್ಪ ಅವರ ವಿಮರ್ಶಾತ್ಮಕ ಕಾರ್ಯಕ್ಕೆ ಹಾನಗಲ್ಲ ತಾಲೂಕು ಸೇರಿ ವಿವಿಧೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.