ಮಾದರಿಯಾದ ಕನ್ನಡ ಶಾಲೆ

ಶ್ರೀಪತಿ ಹೆಗಡೆ ಹಕ್ಲಾಡಿ/ನರಸಿಂಹ ನಾಯಕ್ ಬೈಂದೂರು
ಮುಚ್ಚಿ ಹೋಗುವ ಹಂತಕ್ಕೆ ತಲುಪಿದ್ದ ಶಾಲೆ ಫಿನಿಕ್ಸ್ ಹಕ್ಕಿಯಂತೆ ತಲೆ ಎತ್ತಿದೆ. ಪಾಲಕರ ಸಹಕಾರ, ಶಿಕ್ಷಕರ ಬದ್ಧತೆ, ನಮ್ಮೂರು ನಮ್ಮ ಶಾಲೆ ಎನ್ನುವ ಹಳೇ ವಿದ್ಯಾರ್ಥಿಗಳ ಅಭಿಮಾನ, ಕುಸುಮಾ ಫೌಂಡೇಶನ್ ದತ್ತು ಸ್ವೀಕಾರ, ಇವೆಲ್ಲವೂ ಕನ್ನಡ ಶಾಲೆಯ ಚಿತ್ರಣವನ್ನೇ ಬದಲಾಯಿಸಿದೆ. ಶಾಲೆ ಒಳಗೆ ಹೋಗುವಾಗ ಧನ್ಯತಾ ಭಾವ ಮೂಡುವುದೂ ಸತ್ಯ!

ನಾಗೂರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇಂಥದ್ದೊಂದು ಜಾದು ಮಾಡಿದೆ. ಶಿಥಿಲ ಕಟ್ಟಡ, ಮಕ್ಕಳ ಹಾಜರಾತಿ ಇಳಿಕೆ ಹೀಗೆ ನಾನಾ ಸಮಸ್ಯೆಯಿಂದ ಶಾಲೆ ಮುಚ್ಚುತ್ತದೆ ಎನ್ನುವಂತಿದ್ದರೂ ಈಗ ಅದರಿಂದ ಮೇಲೆದ್ದಿದೆ. ಶಾಲೆಯಲ್ಲಿ ಪ್ರಸಕ್ತ ಒಬ್ಬರು ಗೌರವ ಶಿಕ್ಷಕರೂ ಸೇರಿ ಐವರು ಶಿಕ್ಷಕರಿದ್ದಾರೆ. 2018ರ ಶೈಕ್ಷಣಿಕ ವರ್ಷದಲ್ಲಿ 10 ಮಕ್ಕಳು ಹೊಸ ಹಾಜರಾತಿ ಸೇರಿ 60ರಷ್ಟು ಮಕ್ಕಳಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೊಸ ಸೇರ್ಪಡೆ ಗುರಿ 20ಕ್ಕೆ ಏರಿಸಿಕೊಂಡಿದೆ. ಚಂದದ ಕೊಠಡಿಗಳು. ಸುಂದರ ಅಡುಗೆ ಕಟ್ಟಡ, ಸ್ವಚ್ಛ ಶೌಚಗೃಹ, ಲೈಬ್ರರಿ, ಎಲ್ಲ ನೀಟ್ ಆ್ಯಂಡ್ ಕ್ಲೀನ್.

ಈ ಶಾಲೆಗೂ ಸ್ವಾಮಿ ವಿವೇಕಾನಂದರಿಗೂ ಸಂಬಂಧವಿದೆ. ಸ್ವಾಮಿ ವಿವೇಕಾನಂದರು ಮೈಸೂರಿಗೆ ಬಂದ ಸಂದರ್ಭ ಹಿಂದುಳಿದ ಜನರನ್ನು ಶೈಕ್ಷಣಿಕವಾಗಿ ಮುಂದಕ್ಕೆ ತಂದರೆ ಮಾತ್ರ ಸಮಾಜದಲ್ಲಿರುವ ತಾರತಮ್ಯ ಹೋಗಲಾಡಿಸುವ ಸಾಧ್ಯ ಎಂದು ಮೈಸೂರು ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರಿಗೆ ಸಲಹೆ ಮಾಡಿದ್ದೇ ನಾಗೂರಿನಲ್ಲಿ ಶಾಲೆ ಹುಟ್ಟಲು ಕಾರಣ. 1932ರಲ್ಲಿ ರಾಜ್ಯದಲ್ಲಿ ತಲೆ ಎತ್ತಿದ ಐದು ಶಾಲೆಗಳಲ್ಲಿ ನಾಗೂರು ಶಾಲೆಯೂ ಒಂದು.

20 ವರ್ಷ ಸರ್ವೀಸ್ ಹತ್ತೂವರೆ ರಜೆ!: ನಾಗೂರು ಕನ್ನಡ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರೇ ಉಳಿದ ಶಿಕ್ಷಕರಿಗೆ ಮಾದರಿ. 20 ವರ್ಷದಿಂದ ಶಿಕ್ಷಕರಾಗಿ ಬೇರೆ ಕಡೆ ಸೇವೆ ಸಲ್ಲಿಸಿ, ನಾಗೂರು ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿಭಾಯಿಸುತ್ತಿರುವ ಗುರುರಾಜ್ ಪಡುವರಿ ಇದುವರೆಗೆ ಮಾಡಿದ ರಜೆ ಕೇವಲ ಹತ್ತೂವರೆ ಮಾತ್ರ. ಇದು ಅವರಿಗಿರುವ ಬದ್ಧತೆ, ಮಕ್ಕಳ ಮೇಲಿನ ಪ್ರೀತಿಗೆ ಸಾಕ್ಷಿ. ನಾಲ್ಕು ವರ್ಷದ ಹಿಂದೆ ಶಿಕ್ಷಕ ದಿನಾಚರಣೆ ಸಂದರ್ಭ ಗುರುರಾಜ್ ಪಡುವರಿ ಕುರಿತು ವಿಜಯವಾಣಿ ವರದಿ ಮಾಡಿತ್ತು.

ಸರ್ಕಾರದ ನಿರ್ಲಕ್ಷೃ, ಹೆತ್ತವರಿಗೆ ಇಂಗ್ಲಿಷ್ ಮೀಡಿಯಂ ಶ್ರೇಷ್ಠ ಎಂಬ ಭಾವನೆ, ಸ್ಪರ್ಧಾತ್ಮಕ ಬದುಕಿನ ನಾಗಾಲೋಟಕ್ಕೆ ಕನ್ನಡ ಶಾಲೆ ಭಾಷೆ ನಲುಗುತ್ತಿರುವುದನ್ನು ಗಮನಿಸಿ, ಶಾಲೆ ಉಳಿಸುವ ನಿಟ್ಟಿನಲ್ಲಿ ಕುಸುಮಾ ಫೌಂಡೇಶನ್ ಶಾಲೆ ತೆಗೆೆದುಕೊಂಡು ಅಭಿವೃದ್ಧಿಪಡಿಸುತ್ತಿದೆ. ಆಧುನಿಕ ಪೀಠೋಪಕರಣ, ಶಾಲೆಗೆ ಸ್ವಂತ ವಾಹನ, ಪ್ರಿ ಸ್ಕೂಲ್ ತೆರೆಯುವುದು, ಹೆಚ್ಚುವರಿ ಕೊಠಡಿ ನಿರ್ಮಾಣ ಮುಂದಿರುವ ಸವಾಲಾಗಿದೆ. ಶಾಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಗುರಿ ಹೊಂದಲಾಗಿದೆ.
ನಳಿನ್ ಕುಮಾರ್ ಶೆಟ್ಟಿ ಆಡಳಿತ ನಿರ್ದೇಶಕ, ಕುಸುಮಾ ಫೌಂಡೇಶನ್ ನಾಗೂರು

ಶಿಕ್ಷಕಿಯಾಗಿ ಆರಂಭದ ದಿನದಲ್ಲಿ ಬೈಂದೂರು ಸರ್ಕಾರಿ ಶಾಲೆಯಲ್ಲಿದ್ದು, ಅಲ್ಲಿ ಸಾಕಷ್ಟು ಮಕ್ಕಳಿದ್ದರು. ನಾಗೂರು ಶಾಲೆಗೆ ವರ್ಗವಾಗಿ ಬಂದಾಗ ತರಗತಿಯಲ್ಲಿ ಬೆರಳೆಣಿಕೆ ಮಕ್ಕಳಿದ್ದು, ಪಾಠ ಮಾಡಲು ಸಂಕೋಚವಾಗುತ್ತಿತ್ತು. ಆದರೆ ಈಗ ಆ ಭಯವಿಲ್ಲ. ಶಾಲೆಯಲ್ಲಿ ಸಾಕಷ್ಟು ಮಕ್ಕಳಿದ್ದು, ಪಾಠ ಮಾಡಲು ಖುಷಿಯಾಗುತ್ತದೆ. ಶಾಲೆ ಕೂಡ ಉತ್ತಮ ಪರಿಸರ, ಶಿಕ್ಷಕರ ಸಕಾರಾತ್ಮಕ ಬೆಂಬಲ, ಪಾಲಕರು ಹಾಗೂ ಕುಸುಮಾ ಫೌಂಡೇಶನ್ ಬೆಂಬಲದಿಂದ ಮಾದರಿ ಶಾಲೆಯಾಗಿ ರೂಪಗೊಳ್ಳುತ್ತಿದೆ.
ಮರ್ಲಿ ಮೊಗವೀರ
ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಗೂರು.

ನಾಗೂರು ಸರ್ಕಾರಿ ಶಾಲೆಗೆ ಮುಖ್ಯಶಿಕ್ಷಕನಾಗಿ ಬರುವ ಮುನ್ನ ಶಾಲೆ ಹಾಜರಾತಿ ಜತೆ ಕಟ್ಟಡ ಕೂಡ ಶಿಥಿಲಾವಸ್ಥೆಯಲ್ಲಿದ್ದು, ಮುಚ್ಚುವ ಹಂತಕ್ಕೆ ಬಂದಿತ್ತು. ಸ್ಥಳೀಯ ಕುಸುಮಾ ಫೌಂಡೇಶನ್ ಶಾಲೆ ದತ್ತು ತೆಗೆದುಕೊಳ್ಳುವ ಮೂಲಕ ಶಾಲೆ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಯಿತು. ಪಾಲಕರು ಶಾಲೆ ಮೇಲೆ ಇಟ್ಟ ಅಭಿಮಾನದಿಂದ ಶಾಲೆ ಹಾಜರಾತಿಯೂ ಏರಿಕೆ ಕಂಡಿದ್ದು, ಸ್ಥಳೀಯರಾದ ಗಣಪತಿ ಪೈ ಅವರ ಮಗ ಗೋವಿಂದ ಪೈ 19 ಸೆನ್ಸ್ ಜಾಗ ಉಚಿತವಾಗಿ ನೀಡಿದರು. ಹಳೇ ಕಟ್ಟಡದ ಬದಲು ಈಗ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದು, ಶೌಚಗೃಹ, ಅಡುಗೆ ಕಟ್ಟಡ ಎಲ್ಲವೂ ಇದೆ. ಆಟದ ಮೈದಾನದ ಕೊರತೆ ಒಂದು ನೀಗಿದರೆ ಮಕ್ಕಳ ಆಟೋಟಕ್ಕೆ ಅನುಕೂಲವಾಗಲಿದೆ.
ಗುರುರಾಜ್ ಪಡುವರಿ ಮುಖ್ಯಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಗೂರು