ಮಾದರಿ ತೋಟಗಾರಿಕೆ ಕ್ಷೇತ್ರ

ಅವಿನ್ ಶೆಟ್ಟಿ ಉಡುಪಿ
ವ್ಯವಸ್ಥಿತ ತೋಟಗಾರಿಕಾ ಪದ್ಧತಿ, ವರ್ಷದಿಂದ ವರ್ಷಕ್ಕೆ ಆದಾಯ ದ್ವಿಗುಣ, ಬಗೆಬಗೆಯ ಹಣ್ಣು, ತರಕಾರಿ ಸಸಿಗಳು, ಸಮೃದ್ಧ ಬೆಳೆಗಳಿಂದ ಗಮನ ಸೆಳೆಯುತ್ತಿದೆ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಫಾರ್ಮ್‌ಗಳು.

ಜಿಲ್ಲೆಯಲ್ಲಿ ಆರು ತೋಟಗಾರಿಕಾ ಕ್ಷೇತ್ರಗಳಿದ್ದು, ದೊಡ್ಡಣಗುಡ್ಡೆ ಶಿವಳ್ಳಿ 2.48 ಎಕರೆ, ವಾರಂಬಳ್ಳಿ 2.74 ಎಕರೆ, ಕುಂದಾಪುರದ ಕುಂಭಾಶಿ 22.55 ಎಕರೆ, ಕೆದೂರು 13.62 ಎಕರೆ, ಕಾರ್ಕಳದ ಕುಕ್ಕುಂದೂರು 15.19 ಎಕರೆ, ರಾಮಸಮುದ್ರ 196.97 ಎಕರೆ ತೋಟಗಾರಿಕೆ ಕ್ಷೇತ್ರ ಮಾದರಿಯಾಗಿ ಗುರುತಿಸಿಕೊಂಡಿದೆ. 500 ಹೆಕ್ಟೇರ್ ತೋಟಗಾರಿಕೆ ಬೆಳೆ ವಿಸ್ತರಣೆ ಗುರಿ ದಾಟಿ 711 ಹೆಕ್ಟೇರ್ ವಿಸ್ತರಣೆಯಾಗಿದೆ. ಸಮೃದ್ಧ ತೋಟಗಾರಿಕೆ ವಲಯವಾಗಿ ಮಾವು, ತೆಂಗು, ಚಿಕ್ಕು, ಗೇರು, ತರಕಾರಿ ಸಸಿ, ವಾಣಿಜ್ಯ ಸಸಿಗಳ ಉತ್ಪಾದನೆ, ಫಾರ್ಮ್, ರೈತ ಸೇವಾ ಕೇಂದ್ರವನ್ನು ಹೊಂದಿದೆ.

ತೋಟಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ನೀರಿನ ಅಗತ್ಯ ಇದ್ದು, ಅಂತರ್ಜಲ ವೃದ್ಧಿಗಾಗಿ ವರ್ಷದ ಎಲ್ಲ ದಿನಗಳಲ್ಲೂ ನೀರಿನ ಅವಶ್ಯಕತೆಗಾಗಿ ಎಲ್ಲ ತೋಟಗಾರಿಕೆ ಕ್ಷೇತ್ರಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಲಾಗಿದೆ. ಕಾರ್ಕಳ ರಾಮಸಮುದ್ರ ತೋಟಗಾರಿಕೆ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇಲ್ಲ. ಶಿವಳ್ಳಿಯಲ್ಲಿ ಬೇಸಿಗೆ ನೀರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಂತರ್ಜಲ ವೃದ್ಧಿಗೆ 8.89 ಲಕ್ಷ ಲೀಟರ್ ಸಾಮರ್ಥ್ಯದ ಗುಂಡಿ ನಿರ್ಮಿಸಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ರೈತರು, ಜನರ ಸಹಕಾರ, ಸಿಬ್ಬಂದಿ ಅವಿರತ ಶ್ರಮದಿಂದಾಗಿ ಉತ್ತಮ ಫಲಿತಾಂಶ ಸಿಗಲು ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

52 ಲಕ್ಷ ರೂ. ಆದಾಯ: ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳು ಸಸಿ ಮಾರಾಟ ಮತ್ತು ಬೆಳೆಗಳ ಹರಾಜಿನಿಂದ ಉತ್ತಮ ಆದಾಯ ಗಳಿಸಿದ್ದು, ವರ್ಷದಿಂದ ವರ್ಷಕ್ಕೆ ಆದಾಯ ಏರಿಕೆಯಾಗುತ್ತಿದೆ. 2018-19ರಲ್ಲಿ 52.43 ಲಕ್ಷ ರೂ. ಆದಾಯ ಲಭಿಸಿದೆ. ದೊಡ್ಡಣಗುಡ್ಡೆ ಶಿವಳ್ಳಿ 12.51 ಲಕ್ಷ ರೂ., ವಾರಂಬಳ್ಳಿ 5.72 ಲಕ್ಷ ರೂ., ಕೆದೂರು 5.66 ಲಕ್ಷ ರೂ., ಕುಂಭಾಶಿ 7.08 ಲಕ್ಷ ರೂ., ಕುಕ್ಕುಂದೂರು 9.45 ಲಕ್ಷ ರೂ., ರಾಮಸಮುದ್ರ 11.98 ಲಕ್ಷ ರೂ. ಆದಾಯ ಗಳಿಸಿದೆ. 2016-17ರ ಸಾಲಿನಲ್ಲಿ 20 ಲಕ್ಷ ರೂ., 2017-18ನೇ ಸಾಲಿನಲ್ಲಿ 37.49 ಲಕ್ಷ ರೂ. ಆದಾಯ ಗಳಿಕೆಯಾಗಿದೆ.

ಕಣ್ತುಂಬಿಕೊಳ್ಳಲು ಅವಕಾಶ: ವಿದ್ಯಾರ್ಥಿಗಳು, ಕೃಷಿ ಆಸಕ್ತರು ಒಮ್ಮೆ ಈ ತೋಟಗಾರಿಕೆ ಕ್ಷೇತ್ರಗಳಿಗೆ ಭೇಟಿ ಕೊಡಬಹುದು. ಗೇರು, ಮಾವು, ಚಿಕ್ಕು, ತೆಂಗು, ರೈತ ಸೇವಾ ಕೇಂದ್ರ ಚಟುವಟಿಕೆ, ಸಸಿಗಳ ಉತ್ಪಾದನೆ ಫಾರ್ಮ್, ನೆಟ್‌ಹೌಸ್ ಆಕರ್ಷಕವಾಗಿದೆ. ರಾಮಸಮುದ್ರ ತೋಟಗಾರಿಕೆ ಕ್ಷೇತ್ರದಲ್ಲಿ ಹೊಸದಾಗಿ 17 ಎಕರೆ ವಿಶಾಲವಾದ ಮಾವಿನ ತೋಪು ಗಮನ ಸೆಳೆಯುತ್ತಿದೆ. ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ನೆಟ್‌ಹೌಸ್‌ನಲ್ಲಿ ತರಕಾರಿ ಬೆಳೆಸುವುದು, ವಾರಂಬಳ್ಳಿಯಲ್ಲಿ ಕಾಳುಮೆಣಸು, ತೆಂಗು ನರ್ಸರಿ, ಕುಂಭಾಶಿಯಲ್ಲಿ ತೆಂಗು, ಗೇರು ನರ್ಸರಿ, ಕೇದೂರು, ಕುಕ್ಕುಂದೂರಿನಲ್ಲಿ ವಾಣಿಜ್ಯ, ತೋಟಗಾರಿಕೆ ಬೆಳೆಯ ನರ್ಸರಿ ಕಣ್ತುಂಬಿಕೊಳ್ಳಬಹುದು.

ಜಿಲ್ಲೆಯಲ್ಲಿರುವ ಎಲ್ಲ ತೊಟಗಾರಿಕೆ ಕ್ಷೇತ್ರಗಳಲ್ಲಿ ಸಸಿಗಳಿಗೆ ಸಾಕಷ್ಟು ಬೇಡಿಕೆ ಇದೆ. ವಾಣಿಜ್ಯ ಬೆಳೆ ಸೇರಿದಂತೆ ತರಕಾರಿ, ಅಲಂಕಾರಿಕ ಸಸಿಗಳ ಮಾರಾಟ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೊಸದಾಗಿ ರೈತರ ಬೇಡಿಕೆ ಅನುಸಾರ ಕಸಿ ಕಾಳು ಮೆಣಸು ಉತ್ಪಾದನೆ ಮಾಡಲಾಗುತ್ತಿದೆ.
ನಿಧೀಶ್ ಹೊಳ್ಳ ಸಹಾಯಕ ತೋಟಗಾರಿಕೆ ಅಧಿಕಾರಿ