ಮಾದರಿಯಾದ ಸರ್ಕಾರಿ ಶಾಲೆ

– ವಿನಾಯಕ ಬೆಣ್ಣಿ

ಬೆಳಗಾವಿ: ಇಂದು ಸರ್ಕಾರಿ ಶಾಲೆಗಳೆಂದರೆ ಮುಗುಮುರಿಯುವ ಮಕ್ಕಳು, ಪಾಲಕರೇ ಹೆಚ್ಚು. ಆದರೆ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿ ಸರ್ಕಾರಿ ಪ್ರೌಢಶಾಲೆಗೆ ಮಾತ್ರ ಮಕ್ಕಳು ಖುಷಿಯಿಂದ ಬರುತ್ತಾರೆ. ಅದಕ್ಕೆ ಕಾರಣ ಶಾಲೆಯ ಶಿಕ್ಷಕ ಗಿರೀಶ ನಾಯ್ಕ ಅವರ ಪರಿಸರ ಕಾಳಜಿ, ಒಳ್ಳೆಯ ವಾತಾವರಣ, ನೂತನ ಕಲಿಕಾ ಪದ್ಧತಿ.

ಮಲೆನಾಡ ಸೆರಗಿನಲ್ಲಿರುವ ಈ ಶಾಲೆಯ ಆವರಣದಲ್ಲಿ ಕಾಲಿಟ್ಟರೆ ಸಂತೃಪ್ತಿಯ ಭಾವ ಮೂಡುತ್ತದೆ. ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲ ಅಭಿವೃದ್ಧಿ ಮಾಡಬಹುದು ಗಿರೀಶ ತೋರಿಸಿ ಕೊಟ್ಟಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ ನಾಯ್ಕ ಸರ್ಕಾರಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಹಲವು ವರ್ಷಗಳ ಹಿಂದೆ ಈ ಶಾಲೆಗೆ ಖಾಸಗಿ ಸ್ಥಳವೇ ಆಸರೆಯಾಗಿತ್ತು. ಸ್ವಂತ ಕಟ್ಟಡ ಇಲ್ಲದಿರುವುದಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೂ ಹಿನ್ನಡೆಯಾಗಿತ್ತು. ಆದರೆ, ಸ್ವಂತ ಕಟ್ಟಡದ ಭಾಗ್ಯ ಒಲಿದ 4 ವರ್ಷಗಳಲ್ಲಿ ಶಾಲೆ ಜಿಲ್ಲೆಗೆ ಮಾದರಿ ಹೊರಹೊಮ್ಮಿದೆ.

ಏನೇನು ಸೌಲಭ್ಯ?: ಈ ಪ್ರೌಢಶಾಲೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ವಿಶಾಲ ಆಟದ ಮೈದಾನ, ಕ್ರೀಡಾ ಪರಿಕರ, ಉತ್ತಮ ಸಲಕರಣೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಪಠ್ಯಕ್ಕೆ ಪೂರಕವಾದ ಬೋಧನಾ ವಸ್ತುಗಳಿವೆ. ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸುವಲ್ಲಿ ಶಿಕ್ಷಕ ಗಿರೀಶ ಅಪಾರ ಶ್ರಮವಹಿಸಿದ್ದಾರೆ. ಶಾಲೆ ಆಡಳಿತ ಮಂಡಳಿ, ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಗ್ರಾಮಸ್ಥರಿಂದ ನಿಧಿ ಸಂಗ್ರಹಿಸಿ ಶಾಲೆ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಈ ಹಿಂದೆ ಜಮಖಂಡಿಯ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ 2011ರಲ್ಲಿ ಚಿಕ್ಕಹಟ್ಟಿಹೊಳಿ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡರು.

ಅಂದಿನಿಂದ ಈವರೆಗೆ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 8 ಶಿಕ್ಷಕರು ಇದ್ದು, 8ರಿಂದ 10ನೇ ತರಗತಿವರೆಗೆ ಒಟ್ಟು 130 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ರಾಜ್ಯಮಟ್ಟದಲ್ಲಿ ಮಿಂಚಿದ ಪ್ರತಿಭೆಗಳು: ಶಾಲೆಯ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಶಿಕ್ಷಕ ಗಿರೀಶ ಮಕ್ಕಳಿಗೆ ಶಿಕ್ಷಣದೊಂದಿಗೆ ಪರಿಸರ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಶಾಲೆ ಆವರಣದಲ್ಲಿ ವಿವಿಧ ಬಗೆಯ ಸುಮಾರು 600ಕ್ಕೂ ಅಧಿಕ ಸಸಿ ನೆಟ್ಟು ಪೋಷಣೆ ಮಾಡುತ್ತಿದ್ದಾರೆ.

ಶಾಲೆ ಆವರಣದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಮಾಡುವ ಮೂಲಕ ಮಕ್ಕಳಲ್ಲಿ ಭಕ್ತಿ ಭಾವ ಮೂಡಿಸುತ್ತಿದ್ದಾರೆ. ಶಿಕ್ಷಕ ಗಿರೀಶ ಅವರ ಈ ಎಲ್ಲ ಸಾಧನೆ ಗಮನಿಸಿ 2015-16ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಸ್ವಂತ ಹಣದಿಂದ ಶಾಲೆಗೆ ಪೀಠೋಪಕರಣ ಖರೀದಿ: ಶಿಕ್ಷಕ ಗಿರೀಶ ಅವರು ತಮ್ಮ ತಾಯಿಯ ಸ್ಮರಣಾರ್ಥ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಗತ್ಯ ಸಾಮಗ್ರಿಗಳನ್ನು ಸ್ವಂತ ಹಣದಿಂದ ಖರೀದಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಶೈಕ್ಷಣಿಕ ವರ್ಷದ ನವೆಂಬರ್‌ನಿಂದ ಮಾರ್ಚ್‌ವರೆಗೆ ವಿಶೇಷ ತರಗತಿ ನಡೆಸುತ್ತಾರೆ.

ಮಕ್ಕಳ ಸುರಕ್ಷತೆಗಾಗಿ ಶಾಲೆಯ ಆವರಣಕ್ಕೆ ಕಾಂಪೌಂಡ್ ನಿರ್ಮಿಸಲಾಗಿದೆ. ಅಲ್ಲದೆ ಆವರಣದಲ್ಲಿ ಹಲವು ಹಣ್ಣಿನ ಗಿಡಗಳು ಹಾಗೂ ಔಷಧ  ಗುಣವುಳ್ಳ ಸಸ್ಯ ಬೆಳೆಸಿದ್ದಾರೆ. ಇಷ್ಟೆಲ್ಲ ಶಾಲೆ ಅಭಿವೃದ್ಧಿಗೆ ಕಾರಣವಾಗಿರುವ ಶಿಕ್ಷಕ ಗಿರೀಶ ನಾಯ್ಕ ಸೇವೆಗೆ ಸಾರ್ವಜನಿಕರಿಂದ ಅಪಾರ ಪ್ರಶಂಸೆ ವ್ಯಕ್ತವಾಗಿದೆ.

ಕ್ರೀಡೆ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾತ್ರ ಎನ್ನುವ ಮಾತು ದೂರವಾಗಬೇಕು. ಪಾಲಕರು ಸರ್ಕಾರಿ ಶಾಲೆ ಬಗ್ಗೆ ನಕಾರಾತ್ಮಕ ಭಾವನೆ ಹೊಂದಬಾರದು. ಗ್ರಾಮೀಣ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು. ಇನ್ನುಳಿದ ಶಿಕ್ಷಕರು ಚಿಕ್ಕಹಟ್ಟಿಹೊಳಿ ಶಾಲೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರೆಲ್ಲರ ಸಹಕಾರ ಇಲ್ಲದಿದ್ದರೆ ಶಾಲೆಯ ಪ್ರಗತಿ ಅಸಾಧ್ಯವಾಗುತ್ತಿತ್ತು.
ಗಿರೀಶ ನಾಯ್ಕ
| ಚಿಕ್ಕಹಟ್ಟಿಹೊಳಿ ಶಾಲೆ ಶಿಕ್ಷಕ

Leave a Reply

Your email address will not be published. Required fields are marked *