ಬ್ರಹ್ಮಾವರದಲ್ಲಿ ಮಾದರಿ ಕ್ಯಾಂಟೀನ್

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

ತಂಬಾಕು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ, ಅದನ್ನು ಉಪಯೋಗಿಸುವವರ ಹಾಗೂ ಮಾರಾಟ ಮಾಡುವವರ ಸಂಖ್ಯೆ ಕಡಿಮೆ ಇಲ್ಲ. ಅದರಿಂದ ಹೆಚ್ಚು ಆದಾಯ ಪಡೆಯಬಹುದು ಎಂದು ಎಲ್ಲೆಂದರಲ್ಲಿ ಮಾರಾಟ ಮಾಡುತ್ತಾರೆ.

ಪ್ರತಿದಿನ ಸಹಸ್ರಾರು ಜನರು ಸಂಚರಿಸುವ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿರುವ ಒಂದು ಅಂಗಡಿ ಇದಕ್ಕೆ ಅಪವಾದ. ಬಸ್ ನಿಲ್ದಾಣದಲ್ಲಿರುವ ವಿಜಯವಾಣಿ ಪತ್ರಿಕೆ ಮಾರಾಟಗಾರ, ವಾರಂಬಳ್ಳಿ ಕ್ಯಾಂಟೀನ್ ಮಾಲೀಕ ಪ್ರವೀಣ್‌ಚಂದ್ರ ನಾಯಕ್ ತಮ್ಮ ಅಂಗಡಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದೆ ಇತರರಿಗೆ ಮಾದರಿಯಾಗಿದ್ದಾರೆ.

ಎಷ್ಟೋ ಜನ ಪ್ರತಿದಿನವೂ ತಮ್ಮ ಅಂಗಡಿಗೆ ನಶ್ಯ, ಬೀಡಿ, ಸಿಗರೇಟು, ಗುಟ್ಖಾ ಮುಂತಾದ ತಂಬಾಕು ಉತ್ಪನ್ನ ಕೇಳಿಕೊಂಡು ಬರುತ್ತಾರೆ. ಆದರೆ ಅವುಗಳು ಇಲ್ಲಿ ಸಿಗದು. ಅಂಗಡಿಯಲ್ಲಿ ಚಹಾ, ತಂಪು ಪಾನೀಯ, ಬೇಕರಿ ಉತ್ಪನ್ನ ಹಾಗೂ ಚಾಕಲೇಟು ಮಾತ್ರ ದೊರೆಯುವ ವಸ್ತುಗಳು.
ಅಂಗಡಿ ಮಾಲೀಕರ ಸಹೋದರ ನವೀನಚಂದ್ರ ನಾಯಕ್ ವಾರಂಬಳ್ಳಿ ಗ್ರಾಪಂ ಅಧ್ಯಕ್ಷರಾಗಿದ್ದು, ಅವರ ಪರಿಕಲ್ಪನೆಯಂತೆ ಅಂಗಡಿಯಲ್ಲಿ ತಂಬಾಕು ಉತ್ಪನ್ನ ಮಾರಾಟಗೊಳ್ಳುತ್ತಿಲ್ಲ.

ಪೋಲಿಯೋ ಲಸಿಕೆ ಹಾಕಿಸುವ ಕಾರ‌್ಯ: ಪ್ರವೀಣ್‌ಚಂದ್ರ ಅವರು ಪೋಲಿಯೋ ಲಸಿಕೆ ಹಾಕುವ ದಿನದಂದು ಬಸ್ ನಿಲ್ದಾಣದಲ್ಲಿ ಆರೋಗ್ಯ ಅಧಿಕಾರಿಗಳೊಂದಿಗೆ ಸೇರಿ, ಬಸ್‌ನಲ್ಲಿ ಪ್ರಯಾಣ ಮಾಡುವವರ ಮಕ್ಕಳಿಗೆ ಬಸ್ ಒಳಗೆ ಹೋಗಿ ಪೋಲಿಯೋ ಲಸಿಕೆ ಹಾಕಿಸಿ ಮಾದರಿಯಾಗಿದ್ದಾರೆ. ಕೇವಲ ಭಾಷಣದಿಂದ ಸಮಾಜ ಬದಲಾಯಿಸುವ ಹುಚ್ಚು ಸಾಹಸಕ್ಕಿಂತ ಇಂಥ ಮಾದರಿ ಕಾರ್ಯ ಮಾಡಿದಲ್ಲಿ ಸ್ವಲ್ಪವಾದರೂ ಬದಲಾವಣೆ ಸಾಧ್ಯ ಎನ್ನುವುದು ಅಭಿಪ್ರಾಯ.

ಬಸ್ ನಿಲ್ದಾಣ ಬಳಿ ತಂಬಾಕು ತಿಂದು ಉಗುಳಿ ಗಲೀಜು ಮಾಡುವುದು, ಬೀಡಿ ಸಿಗರೇಟು ಸೇದಿ ವಾಯು ಮಾಲಿನ್ಯ ಜತೆಗೆ ಇತರರು ಹೊಗೆ ಸೇವಿಸುವುದು ಸರಿಯಲ್ಲ. ಎಷ್ಟೋ ಲಾಭ ಇದ್ದರೂ ನಾವು ಮೊದಲಿನಿಂದಲೂ ತಂಬಾಕು ಉತ್ಪನ್ನ ಮಾರಾಟ ಮಾಡಿಲ್ಲ, ಇನ್ನು ಮುಂದೆಯೂ ಮಾರಾಟ ಮಾಡುವುದಿಲ್ಲ.
| ಪ್ರವೀಣ ಚಂದ್ರ ನಾಯಕ್ ಮಾಲೀಕರು ವಾರಂಬಳ್ಳಿ ಕ್ಯಾಂಟೀನ್ ಬ್ರಹ್ಮಾವರ