ಮೊಬೈಲ್ ಗೀಳು ಜೀವನ ಹಾಳು…

ಮೊಬೈಲ್ ಫೋನ್ ಎಂಬುದು ಇತ್ತೀಚೆಗೆ ಜನರ ಅವಿಭಾಜ್ಯ ಅಂಗವೇನೋ ಎಂಬಂತಾಗಿಬಿಟ್ಟಿದೆ. ಅದರ ಬಳಕೆ ಒಂದು ಇತಿಮಿತಿಯಲ್ಲಿದ್ದರೆ ಬಳಸುವವರಿಗೆ ಒಳ್ಳೆಯದೇ ಆಗುತ್ತದೆ. ಬಳಕೆ ಅತಿಯಾದರೆ ಏನಾಗುತ್ತದೆ, ಅದರಿಂದ ಹೊರಬರಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂಬುದರ ಸ್ಥೂಲ ಅವಲೋಕನ ಇಲ್ಲಿದೆ.

| ಆರ್.ಬಿ. ಗುರುಬಸವರಾಜ

ಪಿ.ಯು.ಸಿ ಓದಿ ಮನೆಯಲ್ಲಿರುವ ಇಪ್ಪತ್ಮೂರು ವರ್ಷದ ರಮೇಶ ಕಳೆದ ಒಂದು ವಾರದಿಂದ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾನೆ. ಸದಾ ಮಂಪರಿನಲ್ಲಿರುವ ರಮೇಶ ಕೈಯಲ್ಲಿ ಮೊಬೈಲ್ ಹಿಡಿದ ರೀತಿಯಲ್ಲಿ ವರ್ತಿಸುತ್ತಾನೆ. ಎಚ್ಚರವಾದೊಡನೆ ಮೊಬೈಲ್ ಎಲ್ಲಿ ಎಂದು ಹುಡುಕಾಡುತ್ತಾನೆ. ಅಕ್ಕಪಕ್ಕದವರಲ್ಲಿ ಮೊಬೈಲ್ ಕೇಳುತ್ತಾನೆ. ರಮೇಶನ ಈ ಸ್ಥಿತಿ ಬಡ ತಂದೆ ತಾಯಿಗೆ ಚಿಂತೆಯಾಗಿದೆ.

ಹತ್ತನೇ ತರಗತಿಯ ಜ್ಯೋತಿ ಮಾಹಿತಿ ಹುಡುಕುವ ನೆಪದಲ್ಲಿ ಸಂಜೆಯಿಂದ ರಾತ್ರಿ ಮಲಗುವವೆರಗೂ ಸ್ಮಾರ್ಟ್​ಫೋನ್​ಗೆ ಅಂಟಿಕೊಂಡಿರುತ್ತಾಳೆ. ಮಗಳ ಸ್ಮಾರ್ಟ್​ಪೋನ್ ಗೀಳು ಕುರಿತು ತಾಯಿ ಚಿಂತಿತಳಾಗಿದ್ದಾಳೆ.

ಇದು ಕೇವಲ ಜ್ಯೋತಿ ಹಾಗೂ ರಮೇಶರ ಕಥೆಯಲ್ಲ. ಬಹುತೇಕ ಯುವಕರ ಸ್ಥಿತಿಯೂ ಇದೇ ಆಗಿದೆ. ವೈದ್ಯರು ಈ ಕಾಯಿಲೆಗೆ ನೊಮೋಫೋಬಿಯಾ ಎನ್ನುತ್ತಾರೆ. ಇದಕ್ಕೆ ಒಳಗಾದವರು ಶಾಲೆ/ಕಾಲೇಜು ಸಮಯ ಹೊರತು ಪಡಿಸಿದರೆ ಬಹುತೇಕ ವೇಳೆ ಮೊಬೈಲ್ ಫೋನಿಗೆ ಅಂಟಿಕೊಂಡಿರುತ್ತಾರೆ. ಇತ್ತೀಚೆಗೆ ಶಾಲೆ/ಕಾಲೇಜಿನಲ್ಲೂ ಪಾಠದ ವೇಳೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವ ಬಗ್ಗೆ ವರದಿಯಾಗಿದೆ. ಯುವಕರನ್ನು ಆಕರ್ಷಿಸುವ ಅಪ್ಲಿಕೇಶನ್​ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ತಮ್ಮ ವಯಸ್ಸಿನ ಫ್ರೆಂಡ್ಸ್ ಜೊತೆ ಹೊರಗಡೆ ಬಯಲಿನಲ್ಲಿ ಆಟವಾಡುವುದನ್ನು ಬಿಟ್ಟು, ಮೊಬೈಲ್ ಕೈಯಲ್ಲಿ ಹಿಡಿದು ಮೂಲೆ ಸೇರುತ್ತಿದ್ದಾರೆ. ನಾಲ್ಕಾರು ಗೆಳೆಯರು ಒಂದೆಡೆ ಸೇರಿದ್ದರೂ ಪರಸ್ಪರ ಮಾತನಾಡದೇ ಮೊಬೈಲ್​ನಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಅವರು ಸ್ಮಾರ್ಟ್​ಫೋನ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಹೇಗೆ ಬಿಡಿಸಬೇಕೆಂಬುದೇ ಬಹುತೇಕ ಪಾಲಕರ ಚಿಂತೆಯಾಗಿದೆ.

ಏನಿದು ಕಾಯಿಲೆ?: ಮೊಬೈಲ್ ಫೋನ್​ನಿಂದ ದೂರ ಇರಲಾಗದ ಸ್ಥಿತಿಯೇ ನೊಮೋಫೋಬಿಯಾ. ಅಂದರೆ ಸದಾ ಮೊಬೈಲ್ ಫೋನಿಗೆ ಅಂಟಿಕೊಂಡು, ಅದರಲ್ಲಿಯೇ ಕಾಲ ಕಳೆಯುವ ದುರಭ್ಯಾಸ. ಫೋನ್​ನ್ನು ಸದಾ ಬಳಿಯೇ ಇಟ್ಟುಕೊಳ್ಳುವುದು, ಆಗಾಗ ಮೊಬೈಲ್ ಸ್ಕಿ›ೕನ್ ಓಪನ್ ಮಾಡುವುದು, ನೋಟಿಫಿಕೇಶನ್​ಗಳನ್ನು ಗಮನಿಸುವುದು ಮಾಡುತ್ತಿರುತ್ತಾರೆ. ಪದೇ ಪದೇ ಸಾಮಾಜಿಕ ಜಾಲ ತಾಣಗಳಾದ ಫೇಸ್​ಬುಕ್, ವಾಟ್ಸಪ್​ಗಳನ್ನು ಓಪನ್ ಮಾಡುತ್ತಾ ಅದರಲ್ಲೇ ಕಾಲ ಕಳೆಯುತ್ತಾರೆ.

ಪರಿಣಾಮಗಳೇನು?: ಸಂಪರ್ಕ ಕ್ರಾಂತಿಯ ಭಾಗವೆಂದು ಭಾವಿಸಿದ, ಮಿನಿ ಕಂಪ್ಯೂಟರ್​ಗಳಾದ ಮೊಬೈಲ್ ಫೋನ್​ಗಳು ಯುವಜನತೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟುಮಾಡುತ್ತಿವೆ.

ಇಂದಿನ ಮಕ್ಕಳು ಹೆಚ್ಚಿನ ರೇಡಿಯೋ ಫ್ರಿಕ್ವೆನ್ಸಿ ಪರಿಸರದಲ್ಲಿ ಬೆಳೆಯುತ್ತಿದ್ದಾರೆ. ಮೊಬೈಲ್​ಗಳಿಂದ ಹೊರಸೂಸುವ ವಿಕಿರಣಗಳು ಅವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ದೇಹದಲ್ಲಿ ಸೆಲ್​ಫೋನ್ ವಿಕಿರಣ ಪರಿಣಾಮದ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ದಿ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ನಡೆಸಿದ ಅಧ್ಯಯನವು ಮಕ್ಕಳ ಮೇಲೆ ಮೊಬೈಲ್ ಫೋನ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಮೊಬೈಲ್ ಬಳಸುವವರ ಮಿದುಳು ಮತ್ತು ಕಿವಿಯಲ್ಲಿ ಮಾರಣಾಂತಿಕ ಟ್ಯೂಮರ್ ಬೆಳೆಯುವ ಸಾಧ್ಯತೆಯನ್ನು ಅಧ್ಯಯನವು ತೋರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಸೆಲ್​ಫೋನ್ ವಿಕಿರಣ ಭಾಗಶಃ ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂದು ಹೇಳಿದೆ. ಕಿರಿಯರು ಶೇಕಡಾ 60ರಷ್ಟು ವಿಕಿರಣವನ್ನು ಹೀರಿಕೊಳ್ಳುತ್ತಾರೆ. ಅವರ ಮಿದುಳಿನ ತೆಳುವಾದ ಚರ್ಮ, ಅಂಗಾಂಶಗಳು ಮತ್ತು ಮೂಳೆಗಳು ವಯಸ್ಕರಿಗಿಂತ ಎರಡು ಪಟ್ಟು ವಿಕಿರಣವನ್ನು ಹೀರಿಕೊಳ್ಳುತ್ತವೆ. ಈ ವಿಕಿರಣಗಳು ನರಮಂಡಲವನ್ನು ದುರ್ಬಲಗೊಳಿಸಿ ಕ್ಯಾನ್ಸರ್​ಗೆ ಕಾರಣವಾಗುತ್ತವೆ.

ಕೇವಲ 2 ನಿಮಿಷದ ಕರೆಯು 16 ವರ್ಷದೊಳಗಿನ ಮಕ್ಕಳ ಮಿದುಳಿನ ಕಾರ್ಯನಿರ್ವಾಹಕ ಚಟುವಟಿಕೆಯನ್ನು ಬದಲಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಿವಿಗೆ ಹತ್ತಿರವಾಗಿ ಮೊಬೈಲ್ ಹಿಡಿದು ಮಾತನಾಡುವಾಗ ಅದರಿಂದ ಬರುವ ರೇಡಿಯೋ ತರಂಗಗಳು ಮಿದುಳಿನಲ್ಲಿ ವ್ಯಾಪಿಸಿ ಕಲಿಕಾ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ. ಅವರು ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಕ್ರಮೇಣ ಕಲಿಕೆಯಲ್ಲಿ ನಿರಾಸಕ್ತಿ ಉಂಟಾಗುತ್ತದೆ. ಇಂಥವರು ಪರೀಕ್ಷೆಗಳಲ್ಲಿ ನಕಲು ಮಾಡುವುದಕ್ಕೂ ಮುಂದಾಗಬಹುದು. ಅಲ್ಲದೆ, ಅವರು ಮೌಲ್ಯಯುತ ಹವ್ಯಾಸಗಳು ಮತ್ತು ಪ್ರೀತಿಪಾತ್ರರಿಂದ ದೂರವಾಗುತ್ತಾರೆ. ಆಕ್ರಮಣಕಾರಿ ವರ್ತನೆಗಳು ಪ್ರಕಟಗೊಳ್ಳುತ್ತವೆ. ಇದರಿಂದ ಅವರಲ್ಲಿ ಆತಂಕ, ಒತ್ತಡ, ಖಿನ್ನತೆ, ಚಡಪಡಿಕೆ ಉಂಟಾಗುತ್ತದೆ. ಕುಟುಂಬ ಸದಸ್ಯರ ಚಿತ್ರಗಳು ಕೆಲವೊಮ್ಮೆ ಅಂತರ್ಜಾಲದಲ್ಲಿ ಸಿಲುಕಿ, ಅಶ್ಲೀಲ ಸೈಟ್​ಗಳಿಗೆ ಪ್ರವೇಶಹೊಂದಿ ಅವಾಂತರ ತರುವ ಸಾಧ್ಯತೆಗಳಿರುತ್ತವೆ.

ಮೊಬೈಲ್ ಬಳಕೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಸ್ಮರಣಶಕ್ತಿಯೂ ಕಡಿಮೆಯಾಗುತ್ತದೆ ಮತ್ತು ಇದು ಸಹ ಶೈಕ್ಷಣಿಕ ಪ್ರಗತಿ ಕುಂಠಿತವಾಗಲು ಕಾರಣವಾಗುತ್ತದೆ. ದೈಹಿಕ ಚಟುವಟಿಕೆಗಳಿಲ್ಲದೆ ಸ್ಥೂಲಕಾಯ ಉಂಟಾಗುತ್ತದೆ. ಬ್ಲೂವ್ಹೇಲ್, ಮೊಮೋನಂತಹ ಆನ್​ಲೈನ್ ಗೇಮ್ಳು ಮಕ್ಕಳು/ಯುವಕರ ಪ್ರಾಣಕ್ಕೆ ಕಂಟಕವಾಗಬಹುದು. ನಿಮ್ಮ ಮೇಲೆ ಇಡೀ ಸಮಾಜ ಹಾಗೂ ಕುಟುಂಬ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ನಿಮ್ಮನ್ನು ನಂಬಿದವರ ನಿರೀಕ್ಷೆಗಳನ್ನು ನನಸು ಮಾಡುವುದು ನಿಮ್ಮ ಮೊದಲ ಆಧ್ಯತೆಯಾಗಲಿ. ಪುಸ್ತಕ ಹಾಗೂ ಸೃಜನಾತ್ಮಕ ಚಟುವಟಿಕೆಗಳು ನಿಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತವೆ. ಮೊಬೈಲ್ ನಿಮ್ಮನ್ನು ತಲೆ ತಗ್ಗಿಸುವಂತೆ ಮಾಡಬಹುದು. ನಿಮಗೆ ನಿಮ್ಮ ಭವಿಷ್ಯ ಮುಖ್ಯವಾಗಬೇಕೆ ಹೊರತು ಕ್ಷಣಿಕ ಸುಖದ ಮೊಬೈಲ್ ಅಲ್ಲ.

ಕಾರಣಗಳೇನು?

ಇಂದಿನ ವಿಭಕ್ತ ಕುಟುಂಬ ಪದ್ಧತಿಯು ನೊಮೋಫೋಬಿಯಾಕ್ಕೆ ಮೂಲಕಾರಣ. ತಂದೆ-ತಾಯಿ ಇಬ್ಬರೂ ದುಡಿಮೆಯ ಕಾರಣದಿಂದಾಗಿ ಮಕ್ಕಳಿಂದ ಹೆಚ್ಚು ಸಮಯ ದೂರವಿರುತ್ತಾರೆ. ಅವರ ಓಲೈಕೆಗಾಗಿ ಮೊಬೈಲ್ ಫೋನ್ ಕೊಡಿಸುತ್ತಾರೆ. ಆಕರ್ಷಕ ದೃಶ್ಯಗಳು, ಖುಷಿ ನೀಡುವ ವಿಡಿಯೋ ಗೇಮ್ಳು, ಕಣ್ಮನ ಸೆಳೆಯುವ ನೃತ್ಯಗಳು, ನಗಿಸುವ ಹಾಸ್ಯ ತುಣುಕುಗಳು ಅವರನ್ನು ಆಕರ್ಷಿಸಿ, ನೊಮೋಫೋಬಿಯಾಕ್ಕೆ ನಾಂದಿ ಹಾಡುತ್ತವೆ. ಕಡಿಮೆ ಬೆಲೆಗೆ ದೊರೆಯುವ ವೇಗದ ಇಂಟರ್​ನೆಟ್ ಸೌಲಭ್ಯವೂ ಈ ದುರಭ್ಯಾಸಕ್ಕೆ ಇನ್ನೊಂದು ಕಾರಣ.

ಮುಕ್ತಗೊಳ್ಳುವ ಮಾರ್ಗ ಹೇಗೆ?

ಆದಷ್ಟೂ ದೈಹಿಕ ಶ್ರಮದ ಆಟಗಳಲ್ಲಿ ತೊಡಗಿಸಿಕೊಳ್ಳಿ. ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಕುಟುಂಬದ ಸದಸ್ಯರೊಡನೆ ಹೆಚ್ಚು ಬೆರೆಯಿರಿ. ಮನೆಕೆಲಸಗಳಲ್ಲಿ ಪಾಲಕರಿಗೆ ನೆರವಾಗಿ. ಹಾಡುಗಾರಿಕೆ, ನೃತ್ಯ, ಯೋಗ, ಚಿತ್ರಕಲೆ, ಕ್ಲೇ ಮಾಡಲಿಂಗ್​ನಂತಹ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಚೆಸ್, ಕೇರಂ, ಟೇಬಲ್ ಟೆನಿಸ್, ಈಜುಗಳಂತಹ ಒಳಾಂಗಣ ಕ್ರೀಡೆಗಳು ಸದಾ ಕ್ರಿಯಾಶೀಲರಾಗಿರಲು ಸಹಾಯ ಮಾಡುತ್ತವೆ. ಕಥೆ, ಕವನ, ಕಾದಂಬರಿ, ಜೀವನಚರಿತ್ರೆಗಳನ್ನು ಓದಿ. ಪ್ರಯಾಣದ ವೇಳೆ ಮೊಬೈಲ್ ಬಳಸಬೇಡಿ. ರೈಲು, ಬಸ್ಸು, ಕಾರು ಮುಂತಾದ ವಾಹನಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಸಿಗ್ನಲ್​ಗಳಿಗಾಗಿ ರೇಡಿಯೇಷನ್ ಸ್ಕಾ್ಯನಿಂಗ್ ಮಾಡುತ್ತಿರುತ್ತದೆ. ಈ ವೇಳೆಯಲ್ಲಿ ಹೆಚ್ಚು ವಿಕಿರಣ ಹೊರಸೂಸುತ್ತದೆ. ರಾತ್ರಿ ಮಲಗುವಾಗ ಹತ್ತಿರ ಮೊಬೈಲ್ ಇದ್ದರೂ ವಿಕಿರಣಗಳಿಂದ ನೆನಪಿನ ಶಕ್ತಿ ಕುಂಠಿತವಾಗುತ್ತದೆ. ಎರಡು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಬೇಕಿದ್ದರೆ ಲ್ಯಾಂಡ್​ಲೈನ್ ಬಳಸಿ. ಇಲ್ಲವಾದರೆ ಮೊಬೈಲ್​ನಲ್ಲಿ ಓಪನ್ ಸ್ಪೀಕರ್ ಹಾಕಿ ಮಾತನಾಡಿ.

ನೊಮೋಫೋಬಿಯಾ ಲಕ್ಷಣಗಳು

  1. ಒಂಟಿಯಾಗಿರಲು ಬಯಸುವುದು.
  2. ಪ್ರತ್ಯೇಕ ಕೊಠಡಿಗಳಲ್ಲಿ ಇರುವುದು.
  3. ಟಾಯ್ಲೆಟ್​ಗೂ ಮೊಬೈಲ್ ಒಯ್ಯುವುದು.
  4. ಮೊಬೈಲ್ ಕಾಣಿಸದಿದ್ದರೆ ಏನನ್ನೋ ಕಳೆದುಕೊಂಡವರಂತೆ ವರ್ತಿಸುವುದು.
  5. ರಾತ್ರಿಯೂ ದಿಂಬಿನ ಪಕ್ಕ ಮೊಬೈಲ್ ಇಟ್ಟುಕೊಂಡು ಮಲಗುವುದು.
  6. ಎಚ್ಚರವಾದ ಕೂಡಲೇ ಮೊಬೈಲ್ ಸ್ಕಿ›ೕನ್ ಓಪನ್ ಮಾಡಿ ನೋಟಿಫಿಕೇಶನ್ ಗಮನಿಸುವುದು.
  7. ನಿದ್ರಾಹೀನತೆಯಿಂದ ಬಳಲುವುದು.
  8. ಡ್ರಗ್ ವ್ಯಸನಿಯಂತೆ ವರ್ತಿಸುವುದು.
ನಿಮ್ಹಾನ್ಸ್​ನಲ್ಲಿ ಶಟ್ ಕ್ಲಿನಿಕ್!

ಯಾವುದೇ ರೀತಿಯ ತಂತ್ರಜ್ಞಾನದ ಗೀಳು ಮಾನಸಿಕ ಏರುಪೇರಿಗೆ ಕಾರಣವಾಗುತ್ತದೆ, ಅಸ್ವಸ್ಥತೆಗೂ ಕಾರಣವಾಗುತ್ತದೆ. ಇಂಥವರಿಗೆ ಸೇವೆ ನೀಡಲೆಂದು ಬೆಂಗಳೂರಿನ ನಿಮ್ಹಾನ್ಸ್​ನಲ್ಲಿ 2014ರಲ್ಲೇ ಪ್ರತ್ಯೇಕ ವಿಭಾಗವೊಂದು ಅಸ್ತಿತ್ವಕ್ಕೆ ಬಂದಿದೆ. ಎಸ್​ಎಚ್​ಯುುಟಿ ಕ್ಲಿನಿಕ್ (ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ)ಗೆ ಇತ್ತೀಚೆಗೆ ಪ್ರತಿ ವಾರಕ್ಕೆ ಕನಿಷ್ಠ 6-7 ಯುವಜನರು ದಾಖಲಾಗುತ್ತಿದ್ದಾರೆ. ಗೇಮಿಂಗ್, ಮೊಬೈಲ್ ಸಂದೇಶ, ಜಾಲತಾಣಗಳಲ್ಲಿಯೇ ಸಮಯ ಕಳೆಯುವುದು ಇತ್ಯಾದಿ ಯಾವುದೇ ಬಗೆಯ ಅಂತರ್ಜಾಲದ ಗೀಳಿಗೆ ಇಲ್ಲಿ ಸೂಕ್ತ ಮಾರ್ಗದರ್ಶನ, ಪರಿಹಾರ ನೀಡಲಾಗುತ್ತಿದೆ. 16-20ರ ವಯೋಮಾನದ ಯುವಕರು ಗೇಮಿಂಗ್ ಹಾಗೂ ಸಾಮಾಜಿಕ ಜಾಲತಾಣ, 24-28ರ ವಯೋಮಾನದವರು ಅಶ್ಲೀಲ ದೃಶ್ಯಗಳನ್ನು ನೋಡುವುದರ ವ್ಯಸನ ಹೊಂದಿದ್ದಾರೆ ಎನ್ನುವುದು ಕ್ಲಿನಿಕ್​ನ ದಾಖಲೆಗಳಿಂದ ತಿಳಿದುಬಂದಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ತಂತ್ರಜ್ಞಾನದ ವ್ಯಸನಗಳ ಪೈಕಿ ಆನ್​ಲೈನ್ ಗೇಮಿಂಗ್ ಮುಂಚೂಣಿಯಲ್ಲಿದ್ದರೆ, 2ನೇ ಸ್ಥಾನದಲ್ಲಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿದೆ. ಯಾವುದೇ ರೀತಿಯ ಇಂಥ ವ್ಯಸನಗಳು ಯುವಜನತೆಯಲ್ಲಿ ಕಂಡುಬಂದರೆ ತುರ್ತಾಗಿ ನಿಮ್ಹಾನ್ಸ್​ನ ಈ ವಿಭಾಗವನ್ನು ಸಂರ್ಪಸುವುದು ಉತ್ತಮ.