ಚನ್ನಗಿರಿ: ದುಬಾರಿ ಮೊಬೈಲ್ ಖರೀದಿಸಿದ ನಂತರ ನಿಮ್ಮ ಹೊಣೆಗಾರಿಕೆಯೂ ಅಷ್ಟೇ ಇರಬೇಕು. ಅದನ್ನು ಕಳೆದುಕೊಂಡ ಬಳಿಕ ಹುಡುಕುವ ಕೆಲಸ ಆಗಬಾರದು ಎಂದು ಪೊಲೀಸ್ ಡಿವೈಎಸ್‌ಪಿ ರುದ್ರಪ್ಪ ಉಜ್ಜನಕೊಪ್ಪ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರಸುದಾರರಿಗೆ ಮೊಬೈಲ್ ನೀಡಿ, ಮಾತನಾಡಿದರು.
ಆಧುನಿಕ ಕಾಲದಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಸಹಜವಾಗಿದೆ. ವ್ಯವಹಾರ, ಕೆಲಸ, ನೌಕರಿಗೆ ಹೋಗುವಾಗ ನಿಮ್ಮ ಗಮನ ಅದರ ಮೇಲೆ ಇರಬೇಕು. ನಿಮ್ಮ ಹಿಂದೆ ಕದಿಯುವವರೂ ಇದ್ದಾರೆ. ಮೊಬೈಲ್ ಖರೀದಿಸಿ ಬಳಸಿದರೆ ಸಾಲದು. ಅದರ ದಾಖಲೆ ಸರಿಯಾಗಿ ಇಟ್ಟುಕೊಳ್ಳಬೇಕು ಎಂದರು.
ಕಳವು ಆದಾಗ ಠಾಣೆಗೆ ದೂರಿನ ಜತೆ ಸಂಬಂಧಿತ ದಾಖಲೆ ನೀಡಿದಾಗ ಪತ್ತೆ ಹಚ್ಚಲು ಸುಲಭ. ಕೆಲವರು ದಾಖಲೆ ಇಲ್ಲದೆ ಠಾಣೆಗೆ ಬಂದು ದೂರು ನೀಡುತ್ತಾರೆ. ಇದರಿಂದ ಪೊಲೀಸರು ಏನೂ ಮಾಡಲು ಆಗುವುದಿಲ್ಲ ಎಂದರು.
ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 39 ಮೊಬೈಲ್ ಪತ್ತೆ ಹಚ್ಚಲಾಗಿದೆ. ಚನ್ನಗಿರಿ 26, ಬಸವಾಪಟ್ಟಣ 10 ಹಾಗೂ ಸಂತೇಬೆನ್ನೂರಿನ ಮೂವರು ಮಾಲಿಕರಿಗೆ ಮೊಬೈಲ್ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.
ಸಿಪಿಐ ಲಿಂಗನಗೌಡ್ರು, ಪಿಎಸ್‌ಐ ಗುರುಶಾಂತಯ್ಯ ಇತರರಿದ್ದರು.