ಸಿರವಾರ: ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಯೋಜನಾ ನಿರ್ದೇಶಕ ಹಾಗೂ ಸಿರವಾರ ತಾಲೂಕಿನ ನೋಡಲ್ ಅಧಿಕಾರಿ ಶರಣಬಸವರಾಜ ಸೂಚಿಸಿದರು.

ತಾಪಂ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು. ಏನೇ ಸಮಸ್ಯೆ ಕಂಡುಬಂದರೆ ಇಒ ಗಮನಕ್ಕೆ ತಂದು ಬಗೆಹರಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಬಾರದು. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಿಡಿಒಗಳು ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಕೆರೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಬೋರ್‌ವೆಲ್, ಶುದ್ಧ ಕುಡಿವ ನೀರಿನ ಘಟಕ ರಿಪೇರಿ ಇದ್ದಲ್ಲಿ ತಕ್ಷಣ ಮಾಡಬೇಕು. ಉತ್ತಮ ಮಳೆಯಾದ ಕಾರಣ ಖಾಸಗಿ ಕೆರೆಗಳು ಭರ್ತಿಯಾಗಿವೆ. ಏಪ್ರಿಲ್, ಮೇ ಅಂತ್ಯದವರೆಗೆ ಕೆರೆಗಳಲ್ಲಿ ನೀರು ಇರಬೇಕು. ಇನ್ನೂ ಯಾವ ಕೆರೆ ಭರ್ತಿಯಾಗಿಲ್ಲವೋ ಕಾಲುವೆಗೆ ನೀರು ಬಿಟ್ಟಾಗ ತುಂಬಿಸಬೇಕು ಎಂದು ಸೂಚಿಸಿದರು.
ನರೇಗಾದಡಿ ಕೆಲಸ ನೀಡಿ: ಜನರು ಕೆಲಸಕ್ಕಾಗಿ ಗುಳೆ ಹೋಗದಂತೆ ತಡೆಯಬೇಕು. ಜಿಯೋ ಟ್ಯಾಗ್ ಮಾಡಿ ಎನ್‌ಎಂಆರ್ ತೆಗೆಯಬೇಕು. ಏ.1ರಂದು ಎನ್‌ಎಂಆರ್ ಜನರೇಟ್ ಆಗಿರಬೇಕು. ಜನರಿಂದ ಬೇಡಿಕೆಯಂತೆ ಕೆಲಸ ನೀಡಬೇಕು. ಯಾವುದೇ ಕುಂಟ ನೆಪ ಹೇಳಿದರೆ ಕೇಳುವುದಿಲ್ಲ ಎಂದು ಶರಣಬಸವರಾಜ ಎಚ್ಚರಿಕೆ ನೀಡಿದರು.
ತಾಪಂ ಶಶಿಧರ್ ಸ್ವಾಮಿ, ಸಹಾಯಕ ನಿರ್ದೇಶಕ ಮಂಜುನಾಥ, ಗ್ರಾಮೀಣ ಕುಡಿವ ನೀರು ನೈರ್ಮಲ್ಯ ಇಲಾಖೆ ಎಇಇ ಸತೀಶ್ ಇತರರಿದ್ದರು.