ಮೊಬೈಲ್ ಬದಲಿಗೆ ಬಂತು ಪ್ಲಾಸ್ಟಿಕ್ ಮಿಕ್ಸರ್

ಜಗಳೂರು: ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದು ಮೊಬೈಲ್. ಬಂದಿದ್ದು ಮಾತ್ರ ಜ್ಯೂಸ್ ತಯಾರಿಸುವ ಪ್ಲಾಸ್ಟಿಕ್ ಮಿಕ್ಸರ್!.

ಕಡಿಮೆ ದರದಲ್ಲಿ 8 ಸಾವಿರ ಮೌಲ್ಯದ ಸ್ಮಾರ್ಟ್‌ಪೋನ್ ನೀಡಲಾಗುವುದೆಂದು ತಾಲೂಕಿನ ಕೆಳಗೋಟೆ ಗ್ರಾಮದ ಸುನಿಲ್ ಎಂಬುವರು ತಮ್ಮ ಮೊಬೈಲ್‌ಗೆ ಬಂದ ಸಂದೇಶ ನಂಬಿ ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿದ್ದಾರೆ.

ಬುಧವಾರ ಅಂಚೆ ಕಚೇರಿಗೆ ಬಂದಿದ್ದ ಬಾಕ್ಸ್‌ನ್ನು 1500 ರೂ. ಕಟ್ಟಿ ಬಿಡಿಸಿಕೊಂಡಿದ್ದಾನೆ. ಮನೆಗೆ ಬಂದು ನೋಡಿದರೆ ಅಚ್ಚರಿ ಕಾದಿತ್ತು. ಮೊಬೈಲ್ ಬದಲಿಗೆ ಪ್ಲಾಸ್ಟಿಕ್ ಮಿಕ್ಸರ್ ಬಂದಿದೆ. ಕೂಡಲೇ ಕಂಪನಿಯ ವಿಳಾಸದ ನಂಬರ್‌ಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.

ಚಿನ್ನ ಹಾಕಿಕೊಂಡ್ರೆ ಗ್ಯಾಂಗ್ರಿನ್ ನಂಬಿಸಿ ಸರ ಕದ್ದೊಯ್ದ ವಂಚಕರು:

ಜಗಳೂರು: ಮೈ ಮೇಲೆ ಬಂಗಾರ ಹಾಕಿಕೊಂಡರೆ ಗ್ಯಾಂಗ್ರಿನ್ ಬರುತ್ತದೆಂದು ಹೇಳಿ ನಂಬಿಸಿ ಮಹಿಳೆ ಹಾಕಿಕೊಂಡಿದ್ದ 1 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನದ ಸರ ಪಡೆದ ಕಳ್ಳರಿಬ್ಬರು ಪರಾರಿಯಾಗಿದ್ದಾರೆ.

ನಿವೃತ್ತ ಸಹಾಯಕ ಕೃಷಿ ಅಧಿಕಾರಿ, ತಾಲೂಕಿನ ತೋರಣಗಟ್ಟೆ ಗ್ರಾಮದ ಟಿ.ಕುಮಾರಸ್ವಾಮಿ ಅವರ ಪತ್ನಿ ಲಕ್ಷ್ಮಮ್ಮ ವಂಚಿತ ಮಹಿಳೆ.

ಪಟ್ಟಣದ ಸರ್ಕಾರಿ ಆಸ್ಪತ್ರೆ ಪಕ್ಕ ಲಕ್ಷ್ಮಮ್ಮ ನಿಂತಿದ್ದ ವೇಳೆ ಬಂದ ಅಪರಿಚಿತರಿಬ್ಬರು, ಕೊರಳಲ್ಲಿ ಬಂಗಾರ ಹಾಕಿಕೊಂಡರೆ ಗ್ಯಾಂಗ್ರಿನ್ ಬರುತ್ತದೆಂದು ಹೇಳಿ ನಂಬಿಸಿ, ಅವರಿಂದ ಸರ ಬಿಚ್ಚಿಸಿಕೊಂಡು, ಪೇಪರ್ ಸುತ್ತಿದ ವಸ್ತುವೊಂದನ್ನು ಕೊಟ್ಟು ಪರಾರಿಯಾಗಿದ್ದಾರೆ.

ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.