ಬೆಂಗಳೂರು: ಅರಣ್ಯಭೂಮಿ ಒತ್ತುವರಿ, ಕಾಡ್ಗಿಚ್ಚು, ಕಾಡು ಪ್ರಾಣಿ ಹಾವಳಿ ಮತ್ತಿತರ ದೂರುಗಳನ್ನು ಸಚಿತ್ರ ಮಾಹಿತಿಯೊಂದಿಗೆ ನೀಡಲು ಮೊಬೈಲ್ ಆಪ್(Mobile app for forest and environment-related complaints) ಸಿದ್ಧಗೊಳ್ಳಲಿದೆ.
ಜನರು ತಮ್ಮ ದೂರುಗಳನ್ನು ಹಿಡಿದು ಕಚೇರಿಗೆ ಅಲೆಯುವ ಬದಲು ಆಪ್ ಮೂಲಕವೇ ಸಲ್ಲಿಸಲು ಅವಕಾಶ ದೊರೆಯಲಿದೆ. ಅರಣ್ಯ ಒತ್ತುವರಿ, ಕಾಡ್ಗಿಚ್ಚು, ಪರಿಸರ ನಾಶ, ಮರಗಳ ಕಡಿತೆಲೆ ಸೇರಿದಂತೆ ಅರಣ್ಯ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಇನ್ನು ಮೊಬೈಲ್ ಮೂಲಕ ಸಲ್ಲಿಸಲು ಅರಣ್ಯ ಇಲಾಖೆ ಅವಕಾಶ ಮಾಡಿಕೊಡಲಿದೆ.
ನಮ್ಮ ಬೆಂಗಳೂರು ಸಹಾಯ 2.0 ಮಾದರಿಯಲ್ಲಿ ಮೊಬೈಲ್ ಆಪ್ ಮತ್ತು ಅಂತರ್ಜಾಲ ತಾಣ ಸಿದ್ಧಪಡಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ(Eswar Khandre) ತಮ್ಮ ಇಲಾಖೆ ಅರಪ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಜನರು ದೂರು ನೀಡಲು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ದೂರಿಗೆ ಖಚಿತತೆ, ಸಾಕ್ಷ್ಯಗಳನ್ನು ಒದಗಿಸಲು ಈ ಮೊಬೈಲ್ ಆಪ್‌ನಿಂದ ಸಹಾಯವಾಗಲಿದೆ. ಅಲ್ಲದೆ, ದೂರಿಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸ್ಪಷ್ಟ ಸಾಕ್ಷ್ಯ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈಸ್ ಆ್ ಡೂಯಿಂಗ್ ಬಿಸಿನೆಸ್ ಅಡಿ ಮೊಬೈಲ್ ಆಪ್ ಹಾಗೂ ಅಂತಾರ್ಜಲ ತಾಣವನ್ನು ರೂಪಿಸಲಿದೆ.
ಈಗಾಗಲೇ ಬಿಬಿಎಂಪಿ, ಚುನಾವಣಾ ಆಯೋಗ ಸೇರಿದಂತೆ ಅನೇಕ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯ ದೂರು ಸ್ವೀಕಾರಕ್ಕೆ ಈ ರೀತಿಯ ಮೊಬೈಲ್ ಆಪ್/ ಅಂತರ್ಜಾಲ ತಾಣಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಅರಣ್ಯ ಇಲಾಖೆ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಡಲಿದೆ. ಇದರಿಂದ ಅರಣ್ಯ, ಪರಿಸರ ಸಂಬಂಧಿ ದೂರುಗಳ ಸಲ್ಲಿಕೆ ಸರಳಗೊಳ್ಳಲಿದೆ. ಈ ದೂರುಗಳನ್ನು ಸಂಬಂಧಿಸಿದ ಅಧಿಕಾರಿಗಳು ನಿರ್ವಹಿಸಲು ಹಾಗೂ ಪರಿಹರಿಸಲು ಪೂರಕವಾಗಲಿದೆ.
