ಗೋವು ಕಳ್ಳಸಾಗಣೆ ಶಂಕೆ: ರಾಜಸ್ಥಾನದಲ್ಲಿ ವ್ಯಕ್ತಿಯ ದೊಂಬಿ ಹತ್ಯೆ

ಅಲ್ವಾರ್​: ಸಾಮೂಹಿಕ ಹಲ್ಲೆ ಹಾಗೂ ಹತ್ಯೆ ವಿರುದ್ಧ ಸುಪ್ರೀಂ ಕೋರ್ಟ್​ ಖಡಕ್ಕಾಗಿ ಎಚ್ಚರಿಕೆ ನೀಡಿದ್ದರೂ, ಗೋ ರಕ್ಷಣೆ ಹೆಸರಿನಲ್ಲಿ ಶುಕ್ರವಾರ ರಾತ್ರಿ ಗೋವುಗಳ ಕಳ್ಳಸಾಗಣೆ ಮಾಡುತ್ತಿರುವ ಶಂಕೆಯಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ.

ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅಕ್ಬರ್​ ಖಾನ್​ (28) ಎಂಬವರನ್ನು ಹತ್ಯೆ ಮಾಡಲಾಗಿದೆ. ಮೃತ ಅಕ್ಬರ್​ ಹರಿಯಾಣದವರಾಗಿದ್ದು, ಹತ್ಯೆ ನಡೆದಾಗ ಈತನ ಬಳಿ ಎರಡು ಗೋವುಗಳಿತ್ತು ಎನ್ನಲಾಗಿದೆ. ಸಾಮೂಹಿಕ ಹಲ್ಲೆ ನಡೆಯುವಾಗ ಈತನ ಜತೆಗಿದ್ದ ಮತ್ತೊಬ್ಬ ಪರಾರಿಯಾಗಿರುವುದು ತಿಳಿದು ಬಂದಿದೆ.

ಈ ಕುರಿತು ಪೊಲೀಸ್​ ಅಧಿಕಾರಿ ಅನಿಲ್​ ಬೆನಿವಾಲ್​, ‘ಹಲ್ಲೆಗೊಳಗಾದವರು ಹಸು ಕಳ್ಳಸಾಗಣೆಕಾರರು ಎಂಬುದು ಇನ್ನೂ ಖಾತರಿಯಾಗಿಲ್ಲ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಸಿ ಘಟನೆಗೆ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ’ ಎಂದಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಈ ಹತ್ಯೆಯನ್ನು ಖಂಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಸಾಮೂಹಿಕ ಹಲ್ಲೆ ಹಾಗೂ ಹತ್ಯೆಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಇದನ್ನು ಅಪರಾಧ ಎಂದು ಪರಿಗಣಿಸಿ ಕಾನೂನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಹಾಗೆಯೇ ಇಂಥ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ 23 ಮಾರ್ಗಸೂಚಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೊರಡಿಸಿ, 4 ವಾರಗಳೊಳಗೆ ಅನುಷ್ಠಾನ ವರದಿ ನೀಡುವಂತೆ ಕಳೆದ ವಾರವಷ್ಟೆ ಕಟ್ಟಪ್ಪಣೆ ಹೊರಡಿಸಿತ್ತು. (ಏಜೆನ್ಸೀಸ್​)