ಎಸ್‌ಐಗಳ ಮೇಲೆ ಹಲ್ಲೆ ಯತ್ನ

ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಣೆಮಂಗಳೂರು ಬಳಿ ಶುಕ್ರವಾರ ಎಸ್‌ಐಗಳಿಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಗುಂಪಿನ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ, ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧಪಟ್ಟ ಜಮೀನನ್ನು ‘ಅನೆಕ್ಷರ್ ಜಿ’ ಪ್ರಕಾರ ಸರ್ವೇ ಕಾರ್ಯ ಮಾಡುವ ವೇಳೆ ಬಂಟ್ವಾಳ ನಗರ ಠಾಣಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹಾಗೂ ಗ್ರಾಮಾಂತರ ಎಸ್‌ಐ ಪ್ರಸನ್ನ ಅವರ ಮೇಲೆ ಗುಂಪು ಹಲ್ಲೆಗೆ ಯತ್ನಿಸಿದೆ. ಹಲ್ಲೆಗೆ ಮುಂದಾದ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು. ಕೆಲಹೊತ್ತು ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಮೀನು ಅಳತೆ ವೇಳೆ ಕಾನೂನು ಸುವ್ಯವಸ್ಥೆಗೆ ಭಂಗ ಬರುವ ಸಾಧ್ಯತೆಗಳಿವೆ ಎಂಬ ಕಾರಣಕ್ಕೆ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ವಶಕ್ಕೆ ಪಡೆದುಕೊಂಡ ಆರೋಪಿಯನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ಘಟನೆ ಸಂದರ್ಭ ಬಂಟ್ವಾಳ ಎಎಸ್‌ಪಿ ಸೈದುಲು ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ ಗೌಡ, ನಗರ ಠಾಣಾ ಎಸ್‌ಐ ಚಂದ್ರಶೇಖರ್, ಗ್ರಾಮಾಂತರ ಠಾಣಾ ಎಸ್‌ಐ ಪ್ರಸನ್ನ, ಟ್ರಾಫಿಕ್ ಎಸ್‌ಐ ಮಂಜುನಾಥ ಸ್ಥಳದಲ್ಲಿದ್ದು ಹೆಚ್ಚಿನ ಕ್ರಮ ಕೈಗೊಂಡಿದ್ದರು.

ಡಿಸಿ ಕೋರ್ಟ್ ಆದೇಶ: ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧಿಸಿದ ಜಮೀನನ್ನು ಮಾ.23ರಂದು ಸರ್ವೇ ನಡೆಸಲು ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶಿಸಿತ್ತು. ನರಿಕೊಂಬು ಗ್ರಾಮದ ಸ.ನಂ.50/1ರ 1.49 ಎಕ್ರೆ ಜಮೀನನ್ನು ಅಳತೆ ಮಾಡಿ ವಾಸ್ತವಾಂಶ ವರದಿ ನೀಡುವಂತೆ ಉಚ್ಚ ನ್ಯಾಯಾಲಯದ ಸೂಚನೆಯನ್ವಯ ಜಿಲ್ಲಾಧಿಕಾರಿ ನ್ಯಾಯಾಲಯ ಸೂಚನೆ ನೀಡಿತ್ತು.

ಈ ಹಿಂದೆ ಅಳತೆ ಕಾರ್ಯ ನಡೆದಾಗ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸ ನಡೆದಿತ್ತು, ಈ ಬಗ್ಗೆ ದೂರು ಕೂಡ ದಾಖಲಾಗಿತ್ತು. ಮಾ.23ರಂದು ಅಳತೆಯ ಸಂದರ್ಭದಲ್ಲೂ ಇದು ಪುನರಾವರ್ತನೆಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಬಂದೋಬಸ್ತ್ ಕೋರಿ ಬಂಟ್ವಾಳ ನಗರ ಠಾಣೆಗೆ ಅಕ್ಕರಂಗಡಿ ಜುಮಾ ಮಸೀದಿ ಪ್ರಮುಖರು ಮನವಿ ನೀಡಿದ್ದರು.

Leave a Reply

Your email address will not be published. Required fields are marked *