ಚಳ್ಳಕೆರೆ: ರಾಜಕಾರಣಲದಲ್ಲಿ ಸರ್ವರನ್ನೂ ಸಮಾನವಾಗಿ ಕಾಣುವ ಮನೋಭಾವ ವಿಷಯದಲ್ಲಿ ಚಳ್ಳಕೆರೆ ಶಾಸಕರ ಕಾರ್ಯಾಲಯ ಮಾದರಿ ಆಗಿದೆ ಎಂದು ಸಿರಿಗೆರೆ ತರಳಬಾಳು ಮಠದ ಡಾ. ಶ್ರೀ ಶಿವಮೂರ್ತಿ ಶಿಚಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿರುವ ಶಾಸಕರ ಭವನಕ್ಕೆ ಬುಧವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದರು.
ಕಚೇರಿಯಲ್ಲಿ ಪಕ್ಷಾತೀತವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣಿಗಳ ಭಾವಚಿತ್ರಗಳನ್ನು ಒಂದು ಸೂರಿನಡಿ ನೋಡುವ ಅವಕಾಶವಿದೆ. ಜತೆಗೆ ಓದುಗರ ಅಭಿರುಚಿಗೆ ಗ್ರಂಥಾಲಯ ಸ್ಥಾಪಿಸಲಾಗಿದೆ ಎಂದರು.
ಕ್ಷೇತ್ರದಲ್ಲಿ ವಿಶಾಲ ರಸ್ತೆ, ಅಭಿವೃದ್ಧಿ ಕಾರ್ಯಗಳ ಚಿತ್ರಗಳನ್ನು ಅಳವಡಿಸಲಾಗಿದೆ. ಈ ಪರಿಕಲ್ಪನೆ ರಾಷ್ಟ್ರ ಮಟ್ಟದ ರಾಜಕೀಯ ನಾಯಕರ ಕಾರ್ಯಾಲಯದಲ್ಲೂ ಕಾಣಲು ಸಾಧ್ಯವಿಲ್ಲ. ಇದು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ರಾಜ್ಯದ 224 ಶಾಸಕರ ಕಾರ್ಯಾಲಯ ಈ ಮಾದರಿಯಲ್ಲಿ ನಿರ್ಮಾಣ ಆಗಬೇಕು. ರಾಜಕಾರಣದ ಮನಸ್ಥಿತಿಯಲ್ಲೂ ಸಮಾನತೆ ಮತ್ತು ಪಕ್ಷ ಭೇದ ರಹಿತ ವಿಚಾರವಂತಿಕೆ ಬೆಳೆಸಿಕೊಳ್ಳಬೇಕು ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಮಾತ್ರ ಪಕ್ಷದ ಕಾರ್ಯಸೂಚಿ ಪಾಲಿಸುತ್ತೆನೆ. ಬಳಿಕ ಎಲ್ಲ ಪಕ್ಷದವರು ನನ್ನ ಕ್ಷೇತ್ರದ ಜನರು. ಅವರ ಅಭಿವೃದ್ಧಿಗೆ ಶ್ರಮಿಸುವುದು ನನ್ನ ಕರ್ತವ್ಯ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್ ಮಾತನಾಡಿ, ರೈತರ ಹಿತ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಚಿಂತನೆ ಹೊಂದಿರುವ ಶ್ರೀಗಳು ನಾಡಿಗೆ ಮಾದರಿ ಆಗಿದ್ದಾರೆ ಎಂದು ಹೇಳಿದರು.
ನಗರಸಭಾ ಸದಸ್ಯರಾದ ಕೆ.ವೀರಭದ್ರಯ್ಯ, ಸುಜಾತಾ, ಸುಮಾ, ಕವಿತಾ, ಬಿ.ಟಿ.ರಮೇಶಗೌಡ, ಎಂ.ಜೆ.ರಾಘವೇಂದ್ರ, ತಾಪಂ ಮಾಜಿ ಸದಸ್ಯರಾದ ಟಿ. ಗಿರಿಯಪ್ಪ, ಸಿ.ಟಿ.ಶ್ರೀನಿವಾಸ್, ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಮುಖಂಡರಾದ ಕಿರಣ್, ಶಂಕರ್, ಗಾಂಧಿನಗರ ಕೃಷ್ಣ, ಬಿ.ಟಿ. ಶಶಿಧರ, ಮೂಡಲಗಿರಿಯಪ್ಪ, ಅತಿಕುರ್ ರೆಹಮಾನ್ ಇದ್ದರು.