ರಬಕವಿ/ಬನಹಟ್ಟಿ: ಬನಹಟ್ಟಿಯಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೈಮಗ್ಗ ನೇಕಾರರು ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಭಾನುವಾರ 12ನೇ ದಿನ ಪೂರೈಸಿತು.
ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ವಿಜಯವಾಣಿಯೊಂದಿಗೆ ಮಾತನಾಡಿ, ಡಿ-2 ರಂದು ಬೆಳಗ್ಗೆ 10 ಗಂಟೆಗೆ ತೇರದಾಳ ಶಾಸಕ ಸಿದ್ದು ಸವದಿಯವರ ನಿವಾಸ ಹಾಗೂ ಬಿಜೆಪಿ ಕಚೇರಿಗೆ ನೂರಕ್ಕೂ ಅಧಿಕ ನೇಕಾರರಿಂದ ಮುತ್ತಿಗೆ ಹಾಕಲಾಗುವುದೆಂದು ಸ್ಪಷ್ಟಪಡಿಸಿದರು.
ಬೆಂಬಲ: ಬನಹಟ್ಟಿ ಕೆಎಚ್‌ಡಿಸಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ನೇಕಾರರ ಧರಣಿ ಸ್ಥಳಕ್ಕೆ ವಿಜಯಪುರದ ಜಿಲ್ಲಾ ನೇಕಾರ ಮುಖಂಡರು ಆಗಮಿಸಿ ಬೆಂಬಲ ಸೂಚಿಸಿದರು. ಅಂದು ನಡೆಯುವ ಮುತ್ತಿಗೆ ಕಾರ್ಯದಲ್ಲಿ ಪಾವರಲೂಮ್ ನೇಕಾರರೂ ಬೆಂಬಲ ಸೂಚಿಸಿದ್ದಾರೆಂದು ಟಿರ್ಕಿ ತಿಳಿಸಿದ್ದಾರೆ.
ವಿಜಯಪೂರದ ಅಶ್ವಿನಕುಮಾರ ಕೋಷ್ಠಿ ಮಾತನಾಡಿ, ನ್ಯಾಯಯುತವಾದ ನೇಕಾರರ ಹೋರಾಟಕ್ಕೆ ಸರ್ಕಾರದಿಂದ ಸ್ಪಂದನೆಯಾಗದಿರುವುದು ಬೇಸರ ತಂದಿದೆ. ಕನಿಷ್ಠ ಮೂಲ ಸೌಲಭ್ಯಗಳಿಗೂ ಮಣೆ ಹಾಕದೆ, ಉಳ್ಳವರ ಅನುಕೂಲಕ್ಕಾಗಿ ಸರ್ಕಾರ ನಡೆಸುತ್ತಿರುವುದು ಯಾವ ನ್ಯಾಯ?. ಪ್ರಜಾಪ್ರಭುತ್ವ ತಳಹದಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಕಲ್ಲಪ್ಪ ಮೈತ್ರಿ, ರವೀಂದ್ರ ಕಡ್ಲಿ, ಹುನ್ನೂರಿನ ಶಂಕರ ಮರೇಗುದ್ದಿ, ಮೋಹನ ದಢೂತಿ, ಸಿದ್ದು ಕಡ್ಲಿಮಟ್ಟಿ, ಪಾರ್ವತಿ ಜವಳಗಿ, ನಿರ್ಮಲಾ ಮಾಳವದೆ, ಶಿಲ್ಪಾ ಬಾಣಕಾರ, ಶ್ರೀಶೈಲ ಮುಗಳೊಳ್ಳಿ, ಮಲೀಕ್ ಜಮಾದಾರ ಇತರರಿದ್ದರು.