ಬೀದಿದೀಪ ಉದ್ಘಾಟಿಸಿದ ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ
ಉಡುಪಿ: ನಗರಸಭಾ ವ್ಯಾಪ್ತಿಯ ಮಣಿಪಾಲ-ಪರ್ಕಳ ಮುಖ್ಯರಸ್ತೆಯ ಡಿವೈಡರ್ನಲ್ಲಿ ಅಳವಡಿಸಿದ ಬೀದಿದೀಪಗಳನ್ನು ಶಾಸಕ ಯಶ್ಪಾಲ್ ಸುವರ್ಣ ಗುರುವಾರ ಸಂಜೆ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಬೀದಿ ದೀಪ ಬೆಳಗುತ್ತಿರುವುದು ಸಂತಸದ ವಿಚಾರವಾಗಿದೆ. ಅಲ್ಲದೆ, ಈ ಭಾಗದ ಜನರ ಬಹುದಿನದ ಬೇಡಿಕೆಯೂ ಈಡೇರಿದಂತಾಗಿದೆ. ಉಡುಪಿಯ ಕರಾವಳಿ ಬೈಪಾಸ್ನಿಂದ ಪರ್ಕಳ ಗಡಿಭಾಗದ ವರೆಗೆ ದಾರಿದೀಪ ವ್ಯವಸ್ಥೆ ಪೂರ್ಣಗೊಂಡಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
117 ಬೀದಿ ದೀಪ
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಮಣಿಪಾಲದ ಎಂಐಟಿ ಬಳಿಯಿಂದ ಪರ್ಕಳದ ಗಡಿ ಭಾಗದವರೆಗೆ ಉಡುಪಿ ನಗರಸಭೆ ಮತ್ತು ಭಾರಧ್ವಜ್ ಎಂಟರ್ಪೆಸಸ್ ಸಹಭಾಗಿತ್ವದಲ್ಲಿ 117 ಬೀದಿ ದೀಪ ಅಳವಡಿಸಲಾಗಿದೆ ಎಂದರು.
ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಸುಮಿತ್ರಾ ನಾಯಕ್, ಅಶ್ವಿನಿ ಅರುಣ್, ವಿಜಯಲಕ್ಷ್ಮೀ, ಮಂಜುನಾಥ ಮಣಿಪಾಲ, ಬಾಲಕೃಷ್ಣ ಶೆಟ್ಟಿ, ಟಿ.ಜಿ. ಹೆಗ್ಡೆ, ಹರೀಶ್ ಶೆಟ್ಟಿ, ಗಿರಿಧರ ಆಚಾರ್ಯ, ಗಿರೀಶ್ ಅಂಚನ್, ಯೋಗೀಶ್ ಸಾಲ್ಯಾನ್, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಸ್ಥಳೀಯ ಮುಖಂಡರಾದ ದಿಲೀಪ್ ಹೆಗ್ಡೆ, ಹೇಮಂತ ಕುಮಾರ್ ಯು., ದೇವು ಪೂಜಾರಿ, ಅಕ್ಷಿತ್ ಶೆಟ್ಟಿ ಹೆರ್ಗ ಇತರರು ಉಪಸ್ಥಿತರಿದ್ದರು.