ಸಿನಿಮಾ

ಧೈರ್ಯಗೆಡದಿರಲು ರೈತರಿಗೆ ಸಲಹೆ

ಮಳೆಹಾನಿ ಪ್ರದೇಶಕ್ಕೆ ಶಾಸಕ, ಡಿಸಿ ಪ್ರತ್ಯೇಕ ಭೇಟಿ ಶೀಘ್ರ ಪರಿಹಾರಕ್ಕೆ ಸೂಚನೆ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಭಾರಿ ಮಳೆ, ಗಾಳಿಗೆ ತಾಲೂಕಿನ ಕಸವನಹಳ್ಳಿ, ಬಿಸುವನಹಳ್ಳಿ ಗ್ರಾಮಗಳಲ್ಲಿ ಹಾನಿಯಾಗಿರುವ ಪ್ರದೇಶಗಳಿಗೆ ಮಂಗಳವಾರ ಶಾಸಕ ಧೀರಜ್ ಮುನಿರಾಜು ಹಾಗೂ ಜಿಲ್ಲಾಧಿಕಾರಿ ಆರ್.ಲತಾ ಅವರು ಪ್ರತ್ಯೇಕ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಶಾಸಕ ಧೀರಜ್ ಮುನಿರಾಜು ಕಸವನಹಳ್ಳಿಯ ರೈತರಾದ ಕೃಷ್ಣಪ್ಪ, ರವಿಚಂದ್ರ, ಚಕ್ರಪಾಣಿ ಅವರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿ, ಕಸವನಹಳ್ಳಿಯಲ್ಲಿ 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತರಕಾರಿ ಬೆಳೆ ಹಾಗೂ ವಾಣಿಜ್ಯ ಬೆಳೆಗಳು ಹಾನಿಯಾಗಿವೆ. ಕಸವನಹಳ್ಳಿ, ಜಿಂಕೆ ಬಚ್ಚಹಳ್ಳಿಯಲ್ಲಿ, ಬಿಸುವನಹಳ್ಳಿಯಲ್ಲಿ ಮನೆಗಳ ಸೀಟುಗಳು ಹಾರಿ ಹೋಗಿವೆ. ರೈತರು ಹಾಗೂ ಮಳೆಯಿಂದ ಹಾನಿಗೊಳಗಾದ ಜನರ ಅಹವಾಲು ಆಲಿಸಿದ್ದು, ಜಿಲ್ಲಾಡಳಿತದಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ಜರುಗಿಸುತ್ತೇನೆ. ಜಿಂಕೆ ಬಚ್ಚಹಳ್ಳಿಯಲ್ಲಿ ಎಂಟು ಮನೆಗಳ ಶೀಟುಗಳು ಹಾರಿ ಹೋಗಿವೆ. ಮನೆ ಮಾಲೀಕರಿಗೆ ತಾಪಂನಿಂದ ನಾಳೆ ಅಥವಾ ಶುಕ್ರವಾರದೊಳಗೆ ಪರಿಹಾರ ಚೆಕ್ ವಿತರಿಸಲು ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಲಾಗಿದೆ ಎಂದರು.
ಮಳೆಯಿಂದಾಗಿ ಹಲವು ರೈತರು ಬೆಳೆನಷ್ಟ ಅನುಭವಿಸಿದ್ದಾರೆ. ಅವರ ಸಂಕಷ್ಟಕ್ಕೆ ಸರ್ಕಾರದಿಂದ ಸಿಗುವ ಅಗತ್ಯ ಪರಿಹಾರ ನೀಡಲಾಗುವುದು. ರೈತರ ಯಾವುದೇ ಸಮಸ್ಯೆ ಇದ್ದರೂ ಅವರೊಟ್ಟಿಗೆ ನಾನಿರುತ್ತೇನೆ ಎಂದರು.

ಬೆಸ್ಕಾಂ ಅಧಿಕಾರಿಗಳಿಗೆ ಚಾಟಿ ಮಳೆ, ಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬಗಳು ಮತ್ತು ಮರಗಳನ್ನು ತೆರವು ಮಾಡಲು ತಡಮಾಡಿದ ಬೆಸ್ಕಾಂ ಅಧಿಕಾರಿಗಳಿಗೆ ಶಾಸಕರು ತರಾಟೆಗೆ ತೆಗೆದುಕೊಂಡರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ನಗರದ ಖಾಸ್‌ಬಾಗ್, ತೇರಿನ ಬೀದಿಯಲ್ಲಿ ಆಗಿರುವ ಹಾನಿಯ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಪರಿಶೀಲಿಸಿ, ತ್ವರಿತಗರಿಯಲ್ಲಿ ದುರಸ್ಥಿ ಮಾಡಿದ್ದಾರೆ. ಗ್ರಾಮಾಂತರ ಭಾಗದಲ್ಲಿ 25ಕ್ಕೂ ಹೆಚ್ಚು ಕಂಬಗಳು ಮುರಿದಿದ್ದು, ಅವನ್ನೂ ಸರಿಪಡಿಸಲಾಗಿದೆ.

ಜಿಲ್ಲಾಧಿಕಾರಿ ಭೇಟಿ : ಮಳೆ ಗಾಳಿಯಿಂದ ಉಂಟಾದ ಬೆಳೆ ಹಾನಿ ಕುರಿತು ಜಿಲ್ಲಾಧಿಕಾರಿ ಆರ್.ಲತಾ ಅವರು ಖುದ್ದು ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದರು. ಕಸವನಹಳ್ಳಿಯ ಕೆಲ ತೋಟಗಳಿಗೆ ಭೇಟಿ ನೀಡಿದರು. ಜೋಳ, ತರಕಾರಿ ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿ, ಸೂಕ್ತ ಪರಿಹಾರಕ್ಕೆ ಕ್ರಮ ಜರುಗಿಸಲು ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಸವನಹಳ್ಳಿಯ ರೈತರಾದ ರವಿಚಂದ್ರ, ಕೃಷ್ಣಪ್ಪ ಹಾಗೂ ಚಕ್ರಪಾಣಿ ಅವರ ತೋಟಗಳಿಗೆ ತಹಸೀಲ್ದಾರ್ ಮೋಹನ ಕುಮಾರಿ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.

ಡಿಸಿ ದಾರಿ ತಪ್ಪಿಸಿದ ಅಧಿಕಾರಿಗಳು ? ಜಿಲ್ಲಾಡಳಿತ ಮತ್ತು ತಾಲೂಕು ಅಧಿಕಾರಿಗಳು ಕಸವನಹಳ್ಳಿಯಲ್ಲಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡುವುದಾಗಿ ಹೇಳಿ ಕೇವಲ ಬಿಸುವನಹಳ್ಳಿ ಗ್ರಾಮಕ್ಕೆ ಬೇಕಾಬಿಟ್ಟಿ ಭೇಟಿ ನೀಡಿದ್ದಾರೆ. ಇದಕ್ಕೆ ತಾಲೂಕು ಕೃಷಿ, ತೋಟಗಾರಿಕೆ ಇಲಾಖಾ ಅಧಿಕಾರಿಗಳೇ ಕಾರಣವಾಗಿದ್ದಾರೆ. ಜಿಲ್ಲಾಧಿಕಾರಿಗಳು ನಿಗದಿತ ಹಳ್ಳಿಗೆ ಭೇಟಿ ನೀಡಲು ಸಿದ್ಧರಿದ್ದರೂ ಅಧಿಕಾರಿಗಳು ದಾರಿ ತಪ್ಪಿಸಿದ್ದಾರೆ. ಕಸವನಹಳ್ಳಿಯಲ್ಲಿ 150 ಕ್ಕೂ ಹೆಚ್ಚು ರೈತರು ಬೆಳಗ್ಗೆಯಿಂದಲೂ ಅಧಿಕಾರಿಗಳಿಗಾಗಿ ಕಾದು ಕುಳಿತಿದ್ದರು. ಕೃಷಿ,ತೋಟಗಾರಿಕೆ ಇಲಾಖಾ ಅಧಿಕಾರಿಗಳ ವೈಫಲ್ಯ ಮುಚ್ಚಿಕೊಳ್ಳಲು ಡಿಸಿಯವರ ದಾರಿ ತಪ್ಪಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Latest Posts

ಲೈಫ್‌ಸ್ಟೈಲ್