ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಶಾಸಕ ಉಮೇಶ್​ ಜಾಧವ್​ ರಾಜೀನಾಮೆ ಅಂಗೀಕರಿಸಿದ ಸ್ಪೀಕರ್​

ಬೆಂಗಳೂರು: ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರಿದ್ದ ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಅವರ ರಾಜೀನಾಮೆಯನ್ನು ಸ್ಪೀಕರ್ ಕೆ.ಆರ್​. ರಮೇಶ್ ಕುಮಾರ್ ಅವರು ಅಂಗೀಕರಿಸಿದ್ದಾರೆ.

ರಾಜೀನಾಮೆ ನೀಡಿದ ಎರಡು ತಿಂಗಳು ಬಳಿಕ ಜಾಧವ್​ ಅವರ ಮನವಿಯನ್ನು ಸ್ಪೀಕರ್​ ಅವರು ಪುರಷ್ಕರಿಸಿದ್ದಾರೆ. ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊಂದು ಬಂಡೆದ್ದು ಮುಂಬೈ ಸೇರಿದ್ದ ಬಂಡಾಯ ನಾಯಕರಲ್ಲಿ ಜಾಧವ್​ ಕೂಡ ಒಬ್ಬರಾಗಿದ್ದರು. ಸಚಿವ ಸ್ಥಾನದಿಂದ ವಂಚಿತರಾಗಿದ್ದ ಜಾಧವ್​ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಮುಂಬೈನಲ್ಲೇ ಉಳಿದಿದ್ದ ಅವರನ್ನು ಬಜೆಟ್​ ಅಧಿವೇಶನಕ್ಕೂ ಹಾಗೂ ಕಾಂಗ್ರೆಸ್​ ಶಾಸಕಾಂಗ ಸಭೆಗೆ ಹಾಜರಾಗುವಂತೆ ನೋಟಿಸ್​ ನೀಡಲಾಗಿತ್ತು. ಶಾಸಕಾಂಗ ಸಭೆಗೆ ಗೈರಾಗಿದ್ದ ಜಾಧವ್​ ಬಜೆಟ್​ ಅಧಿವೇಶನದ ಕೊನೆಯ ದಿನದಲ್ಲಿ ವಿಧಾನಸೌಧದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಜಾಧವ್​ ಅವರನ್ನು ಪಕ್ಷಾಂತರ ನಿಷೇಧ ಕಾಯಿದೆ ಅಡಿ ಶಾಸಕ ಸ್ಥಾನದಿಂದ ಉಚ್ಛಾಟಿಸಬೇಕೆಂದು ಕಾಂಗ್ರೆಸ್​ ಸ್ಪೀಕರ್​ ವಿರುದ್ಧ ದೂರು ನೀಡಿದ್ದರು. ಇದಕ್ಕೆ ತಿರುಗೇಟಾಗಿ ಜಾಧವ್​ ಕೂಡ ಸ್ಪೀಕರ್​ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ರವಾನಿಸಿದ್ದರು.

ಜಾಧವ್​ ಮನಸ್ತಾಪವನ್ನು ತಣಿಸುವಲ್ಲಿ ಕಾಂಗ್ರೆಸ್​ ನಾಯಕರು ಕೂಡ ಪ್ರಯತ್ನಿಸಿದಾದರೂ ಅದು ಕೊನೆಗೂ ಫಲಿಸಲಿಲ್ಲ. ಅಂತಿಮವಾಗಿ ಬಿಜೆಪಿ ಸೇರಿರುವ ಜಾಧವ್​ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಮಲ ಪಕ್ಷದಿಂದ ಚುನಾವಣಾ ಕಹಳೆ ಊದಿದ್ದಾರೆ. ಸತತ ಎರಡು ತಿಂಗಳು ಕಾಲ ಕಾದಂತಹ ಜಾಧವ್​ ಅವರಿಗೆ ಸ್ಪೀಕರ್​ ರಮೇಶ್​ ಕುಮಾರ್​ ಕೊನೆಗೂ ಸಿಹಿ ಸುದ್ದಿ ನೀಡಿದ್ದಾರೆ. ಮಾರ್ಚ್ 4 ರಂದು ಜಾಧವ್​ ರಾಜೀನಾಮೆ ನೀಡಿದ್ದರು.

ಸಿದ್ದರಾಮಯ್ಯ ಕೊಟ್ಟ ದೂರಿಗೂ ರಾಜೀನಾಮೆಗೂ ಸಾಮ್ಯತೆಯಿಲ್ಲ. ತೀರ್ಪು ಯಾವಾಗಲೂ ಸಾಕ್ಷ್ಯಾಧಾರಗಳನ್ನು ಅವಲಂಬಿಸಿರುತ್ತದೆ. ನೈತಿಕತೆಗೆ ಕಾನೂನಾತ್ಮಕ ರಕ್ಷಣೆ ಸಿಗುವುದು ಕಷ್ಟದ ಕೆಲಸ. ನನ್ನ ಸ್ವಂತ ನ್ಯಾಯಿಕ ಪ್ರಜ್ಞೆಯ ಮೇರೆಗೆ ರಾಜೀನಾಮೆ ಅಂಗೀಕರಿಸಿದ್ದೇನೆ ಎಂದು ಸ್ಪೀಕರ್​ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)